×
Ad

ಜ.18ರಂದು ಅದಮಾರು ಪರ್ಯಾಯ ಸಮಾಲೋಚನಾ ಸಭೆ

Update: 2019-10-05 21:59 IST

ಉಡುಪಿ, ಅ.5: ಮುಂದಿನ ಅದಮಾರು ಪರ್ಯಾಯ ಮಹೋತ್ಸವದಲ್ಲಿ ಎಲ್ಲ ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜ.18ರ ಬೆಳಗಿನ ಜಾವದ ಬದಲು ಅಪರಾಹ್ನ ಮೂರು ಗಂಟೆಗೆ ಪರ್ಯಾಯ ದರ್ಬಾರು ನಡೆಸಲು ಉದ್ದೇಶಿಸ ಲಾಗಿದೆ ಎಂದು ಅದಮಾರು ಕಿರಿಯ ಯತಿ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.

ಉಡುಪಿ ಪೂರ್ಣಪ್ರಜ್ಞಾ ಆಡಿಟೋರಿಯಂನ ಮಿನಿಹಾಲ್‌ನಲ್ಲಿ ಶನಿವಾರ ನಡೆದ ಉಡುಪಿ ಅದಮಾರು ಮಠದ ಪರ್ಯಾಯ ಮಹೋತ್ಸವದ ಪೂರ್ವ ಭಾವಿ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡುತಿದ್ದರು.

ಬೆಳಗಿನ ಜಾವ ಮೆರವಣಿಗೆ ವೀಕ್ಷಿಸುವ ಭಕ್ತರು ಸುಸ್ತಾಗಿರುವುದರಿಂದ ಮತ್ತು ಸ್ವಾಮೀಜಿ ಪೂಜೆ ನಡೆಸಿ ವಿಶ್ರಾಂತಿ ಪಡೆಯುವ ಉದ್ದೇಶದಿಂದ ಈ ರೀತಿಯ ನಿರ್ಧಾರ ಮಾಡಲಾಗಿದೆ. ಇದಕ್ಕೆ ಇತರ ಮಠಾಧೀಶರು ಕೂಡ ಒಪ್ಪಿದ್ದಾರೆ ಎಂದು ಅವರು ಹೇಳಿದರು.

ಪರ್ಯಾಯ ಅವಧಿಯಲ್ಲಿ ನೈಸರ್ಗಿಕ ವಿಧಾನಗಳ ಬಳಕೆಯ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ನಿಷೇಧಕ್ಕೆ ಪ್ರಯತ್ನ ಮಾಡಲಾಗುವುದು. ಈ ಕುರಿತು ಭಕ್ತರಿಗೆ ತಿಳು ವಳಿಕೆ ನೀಡುವ ಕೆಲಸ ಮಾಡಲಾಗುವುದು. ಭೋಜನಕ್ಕೆ ಬಳಸುವ ಬಾಳೆಎಲೆ ಗಾಗಿ ಚಾರಾ ಗ್ರಾಮದ 10 ಎಕರೆ ಜಾಗದಲ್ಲಿ ಈಗಾಗಲೇ ಬಾಳೆತೋಟವನ್ನು ಬೆಳೆಸಲಾಗಿದೆ. ಈ ಬಾರಿಯ ಪರ್ಯಾಯವನ್ನು ವಿಜೃಂಭಣೆ ಜೊತೆ ಕಡಿಮೆ ಖರ್ಚಿನಲ್ಲಿ ನಡೆಸಲು ಚಿಂತನೆ ನಡೆಸಲಾಗಿದೆ ಎಂದು ಅವರು ತಿಳಿಸಿದರು.

ಅದಮಾರು ಮಠದ ಹಿರಿಯ ಯತಿ ಶ್ರೀವಿಶ್ವಪ್ರಿಯತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಮುಂದಿನ ಅದಮಾರು ಮಠದ ಪರ್ಯಾಯವು 250ನೆ ಪರ್ಯಾಯ ಮಹೋತ್ಸವ ಆಗಿದ್ದು, ಈ ಕುರಿತು ತೆಗೆದುಕೊಂಡಿರುವ ಕೆಲವೊಂದು ಹೊಸ ಚಿಂತನೆಗಳು ಕಿರಿಯ ಯತಿಗಳದ್ದೇ ಆಗಿದೆ. 15 ದಿನಗಳಿ ಗೊಮ್ಮೆ ನಡೆಯುವ ಹೊರೆಕಾಣಿಕೆಯಿಂದ ಭಕ್ತರು 24 ತಿಂಗಳ ಕಾಲವೂ ಶ್ರೀಕೃಷ್ಣ ಮುಖ್ಯಪ್ರಾಣ ದೇವರ ನೆನು ಇಟ್ಟುಕೊಳ್ಳಬಹುದಾಗಿದೆ ಎಂದರು.

ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಹೊರೆಕಾಣಿಕೆ, ಪ್ಲಾಸ್ಟಿಕ್ ನಿಷೇಧ ಹಾಗೂ ದರ್ಬಾರ್ ಕುರಿತು ವೈಜ್ಞಾನಿಕವಾಗಿ ಚಿಂತನೆ ನಡೆಸಿ ಕ್ರಾಂತಿಕಾರಿ ನಿರ್ಧಾರವನ್ನು ತೆಗೆದುಕೊಂಡಿರುವುದು ಶ್ಲಾಘ ನೀಯ. ಪರ್ಯಾಯ ಮಹೋತ್ಸವಕ್ಕೆ ಸಂಬಂಧಿಸಿ ರಕ್ಷಣೆ, ರಸ್ತೆ ಅಭಿವೃದ್ಧಿ ಮತ್ತು ಆರ್ಥಿಕ ನೆರವು ಕಲ್ಪಿಸಲು ಸರಕಾರ ಕೂಡ ನಿಮ್ಮ ಜೊತೆ ಇರುತ್ತದೆ ಎಂದು ತಿಳಿಸಿದರು.

ಮಾಜಿ ಶಾಸಕ ಎ.ಜಿ.ಕೊಡ್ಗಿ, ಉಡುಪಿ ಶಾಸಕ ಕೆ.ರಘುಪತಿ ಭಟ್, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್ ಮಾತನಾಡಿ ದರು. ಕೃಷ್ಣಾ ಸೇವಾ ಬಳದ ಅಧ್ಯಕ್ಷ ಎಂ.ಬಿ.ಪುರಾಣಿಕ್ ಸ್ವಾಗತಿಸಿದರು. ನಿವೃತ್ತ ಪ್ರಾಂಶುಪಾಲ ಡಾ.ಜಗದೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

15ದಿನಗಳಿಗೊಮ್ಮೆ ಹೊರೆಕಾಣಿಕೆ ಅರ್ಪಣೆ

ಪರ್ಯಾಯ ಮಹೋತ್ಸವದ ಹೊರೆಕಾಣಿಕೆಯನ್ನು ಒಮ್ಮೆಲೆ ತಂದು ರಾಶಿ ಹಾಕುವ ಬದಲು ಮುಂದಿನ ಪರ್ಯಾಯ ಅವಧಿಯಲ್ಲಿ 15 ದಿನಗಳಿಗೊಮ್ಮೆ ಎರಡು ವರ್ಷ ಪೂರ್ತಿ ನಡೆಸಲು ಉದ್ದೇಶಿಸಲಾಗಿದೆ. ಇದರಿಂದ ದವಸ ಧಾನ್ಯ, ತರಕಾರಿ ಸೇರಿದಂತೆ ಇತರ ವಸ್ತುಗಳು ಹಾಳಾಗದಂತೆ ಬಳಸಿಕೊಳ್ಳಬಹುದಾ ಗಿದೆ ಎಂದು ಅದಮಾರು ಕಿರಿಯ ಯತಿ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ತಿಳಿಸಿದರು.

ಸಮಿತಿಯ ಮೂಲಕ ಆಯಾ ಗ್ರಾಮಸ್ಥರ ಹೊರೆಕಾಣಿಕೆ ಮೆರವಣಿಗೆಯನ್ನು ನಿಗದಿಪಡಿಸಲಾಗುವುದು. ಅಲ್ಲದೆ ಹೊರೆಕಾಣಿಕೆ ಅರ್ಪಿಸಿದ ಗ್ರಾಮಸ್ಥ ರಿಗೆ ಶ್ರೀಕೃಷ್ಣ ಪೂಜಾ ದರ್ಶನ, ಪ್ರಸಾದ ಸ್ವೀಕಾರ ಮತ್ತು ತಮ್ಮ ಗ್ರಾಮದ ಜನಪದ ಕಲೆ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವ ಮೂಲಕ ಇಡೀ ದಿನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News