ಅಸಮರ್ಥ ಸಂಸದರ ರಾಜೀನಾಮೆ, ರಾಜ್ಯ ಸರಕಾರದ ವಜಾಕ್ಕೆ ಬಿಎಸ್‌ಪಿ ಆಗ್ರಹ
ಉಡುಪಿ, ಅ.5: ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ಕೇಂದ್ರ ಸರಕಾರದಿಂದ ನೆರವು ಕೊಡಿಸಲು ಅಸಮರ್ಥರಾದ ಸಂಸದರ ರಾಜೀನಾಮೆ ಮತ್ತು ರಾಜ್ಯ ಸರ್ಕಾರವನ್ನು ವಜಾಗೊಳಿಸಲು ಆಗ್ರಹಿಸಿ ಬಹುಜನ ಸಮಾಜ ಪಕ್ಷ ಉಡುಪಿ ಜಿಲ್ಲೆ ಶನಿವಾರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿತು.
ಈ ಬಾರಿ ರಾಜ್ಯದಲ್ಲಿ ಸುರಿದ ಭಾರೀ ಮಳೆಯಿಂದಾಗಿ 22 ಜಿಲ್ಲೆಗಳ 103 ತಾಲೂಕುಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ, ಅಪಾರ ಸಾವು ನೋವುಗಳು ಮತ್ತು ಸುಮಾರು 38,451 ಕೋಟಿ ರೂ. ನಷ್ಟ ಸಂಭವಿಸಿದೆ. ಕೇಂದ್ರ ಸಚಿವರು ನೆರೆ ಪೀಡಿತ ಪ್ರದೇಶಗಳಿಗೆ ತೆರಳಿ, ಪರಿಸ್ಥಿತಿಯ ಗಂಭೀರತೆಯನ್ನು ನೋಡಿ ದ್ದಾರೆ. ಅಲ್ಲದೆ ಕೇಂದ್ರ ಅಧಿಕಾರಿಗಳ ತಂಡ ಕೂಡ ಭೇಟಿ ನೀಡಿ ವರದಿ ಸಲ್ಲಿಸಿದೆ. ಆದರೆ ಈವರೆಗೂ ಕೇಂದ್ರದಿಂದ ಯಾವುದೇ ನೆರೆ ಪರಿಹಾರ ಬಂದಿಲ್ಲ ಎಂದು ಮನವಿಯಲ್ಲಿ ದೂರಲಾಗಿದೆ.
ಕೇಂದ್ರ ಮತ್ತು ರಾಜ್ಯ ಎರಡರಲ್ಲೂ ಬಿಜೆಪಿ ಸರಕಾರವೇ ಆಡಳಿತ ನಡೆಸು ತ್ತಿದೆ. ಅಲ್ಲದೆ ಬಿಜೆಪಿಗೆ ಅತಿಹೆಚ್ಚು ಶಾಸಕರು ಮತ್ತು ಸಂಸದರನ್ನು ನೀಡಿರುವ ಉತ್ತರ ಕರ್ನಾಟಕವನ್ನು ಬಿಜೆಪಿ ಸರಕಾರ ನಿರ್ಲಕ್ಷಿಸುತ್ತಿದೆ. ರಾಜ್ಯದ 28 ಸಂಸದರ ಪೈಕಿ 25 ಸಂಸದರು ಬಿಜೆಪಿಯಿಂದಲೇ ಆಯ್ಕೆಯಾಗಿದ್ದಾರೆ. ಆದರೆ ಇವರೆಲ್ಲ ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಇಂತಹ ಸಂದರ್ಭದಲ್ಲಿ ಸಂತ್ರಸ್ತರಿಗೆ ತಮ್ಮದೇ ಪಕ್ಷದ ಕೇಂದ್ರ ಸರಕಾರದಿಂದ ನೆರವು ತರಲು ಅಸಮರ್ಥರಾಗಿರುವ ಸಂಸದರುಗಳು ತಕ್ಷಣ ರಾಜೀನಾಮೆ ಕೊಡಬೇಕು ಮತ್ತು ಯಡ್ಡಿಯೂರಪ್ಪಸರಕಾರವನ್ನು ವಿಸರ್ಜಿಸಲು ಶಿಫಾರಸ್ಸು ಮಾಡಬೇಕು. ಆದಷ್ಟು ಬೇಗ ಸಂತ್ರಸ್ತರಿಗೆ ಪರಿಹಾರ ಸಿಗದಿದ್ದರೆ ರಾಜ್ಯದಾದ್ಯಂತ ಚಳುವಳಿ ತೀವ್ರಗೊಳಿಸಲಾಗುವುದು ಎಂದು ಪಕ್ಷ ಎಚ್ಚರಿಕೆ ನೀಡಿದೆ.
ಮನವಿಯನ್ನು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಬಿಎಸ್‌ಪಿ ಜಿಲ್ಲಾ ಸಂಯೋಜಕ ಮಂಜುನಾಥ್ ವಿ., ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ತೊಟ್ಟಂ, ಉಪಾಧ್ಯಕ್ಷ ಗಿರೀಶ್ ಕುಂದರ್, ರಮೇಶ್ ಕೋಟ್ಯಾನ್, ಕೃಷ್ಣ ಬಜೆ, ಶಂಭು ಸುವರ್ಣ, ಆನಂದ, ಪುಷ್ಪಾಕರ, ವ್ನಿೇಶ್, ಶೇಖರ್ ಬೆಳ್ಳೆ ಮೊದಲಾದವರು ಉಪಸ್ಥಿತರಿದ್ದರು.