×
Ad

'ಪ್ಯಾಕಿಂಗ್ ಪ್ಲಾಸ್ಟಿಕ್ ಬಳಕೆಗೆ ಒಂದು ತಿಂಗಳ ಕಾಲಾವಕಾಶ'

Update: 2019-10-05 22:06 IST

ಉಡುಪಿ, ಅ.5: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ನಿಷೇಧಿಸಲಾಗಿರುವ ಪ್ಲಾಸ್ಟಿಕ್ ಕುರಿತು ವರ್ತಕರೊಂದಿಗೆ ಸಮಾಲೋಚನೆ ಸಭೆ ಶನಿವಾರ ನಗರ ಸಭೆಯ ಸತ್ಯಮೂರ್ತಿ ಸಭಾಂಗಣದಲ್ಲಿ ಉಡುಪಿ ಶಾಸಕ ಕೆ.ರಘುಪತಿ ಭಟ್ ಅಧ್ಯಕ್ಷತೆಯಲ್ಲಿ ಜರಗಿತು.

ಪರಿಸರ ಇಂಜಿನಿಯರ್ ಲಕ್ಷ್ಮಿಕಾಂತ್ ನಿಷೇಧಿತ ಪ್ಲಾಸ್ಟಿಕ್ ಕುರಿತು ಸಭೆಗೆ ಮಾಹಿತಿ ನೀಡಿದರು. ಈಗಾಗಲೇ ಎಲ್ಲ ರೀತಿಯ ಕ್ಯಾರಿಬ್ಯಾಗ್ ಮತ್ತು 50 ಮೈಕ್ರಾನ್‌ಗಿಂತ ಮೇಲ್ಪಟ್ಟ ಪ್ಲಾಸ್ಟಿಕ್‌ನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನಿಷೇಧಿತ ಪ್ಲಾಸ್ಟಿಕ್ ಕಂಡುಬಂದರೆ ಮೊದಲ ಬಾರಿಗೆ 1000ರೂ., ಎರಡನೆ ಬಾರಿಗೆ 2000ರೂ. ಮತ್ತು ಮೂರನೆ ಬಾರಿಗೆ ಉದ್ಯಮದ ಪರವಾನಿಗೆಯನ್ನು ರದ್ದುಪಡಿಸಲಾಗುವುದು ಎಂದರು.

ಪ್ಲಾಸ್ಟಿಕ್‌ಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಏಕಾಏಕಿ ನಿಷೇಧ ಹೇರಿರುವ ಬಗ್ಗೆ ಸಭೆಯಲ್ಲಿ ವರ್ತಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದೇ ರೀತಿ ಮುಂದು ವರೆದರೆ ರೈತರಂತೆ ನಾವು ಕೂಡ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬರ ಬಹುದು. ಅಂತಹ ಸ್ಥಿತಿಯನ್ನು ಸರಕಾರ ತಂದು ಇಟ್ಟಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಈಗಾಗಲೇ ಖರೀದಿಸಿರುವ ಪ್ಯಾಕಿಂಗ್ ಮಾಡಿರುವ ಪ್ಲಾಸ್ಟಿಕ್‌ನ್ನು ಮಾರಾಟ ಮಾಡಲು ಜನವರಿವರೆಗೆ ಕಾಲಾವಕಾಶ ನೀಡಬೇಕು ಎಂದು ವರ್ತಕರು ಒತ್ತಾಯಿಸಿದರು. ಇದನ್ನು ನಿರಾಕರಿಸಿದ ರಘುಪತಿ ಭಟ್, ಈ ಬಗ್ಗೆ ಜಿಲ್ಲಾಧಿ ಕಾರಿಗಳು ಅವಕಾಶ ನೀಡಲ್ಲ ಎಂದರು. ಇದಕ್ಕೆ ಪೂರಕವಾಗಿ ಮಾತನಾಡಿದ ಪೌರಾಯುಕ್ತ ಆನಂದ ಕಲ್ಲೋಳಿಕರ್, ಸರಕಾರದ ಸುತ್ತೋಲೆಯಂತೆ ನಾವು ನಮ್ಮ ಕರ್ತವ್ಯವನ್ನು ನಿರ್ವಹಿಸಬೇಕಾಗುತ್ತದೆ. ಯಾವುದೇ ಪ್ಲಾಸ್ಟಿಕ್‌ಗಳಿಗೂ ರಿಯಾಯಿತಿ ನೀಡಲು ಅವಕಾಶ ಇಲ್ಲ ಎಂದರು.

ಈ ಕುರಿತು ಸಭೆಯಲ್ಲಿ ವ್ಯಾಪಕ ಚರ್ಚೆ ನಡೆದಿದ್ದು, ಅಂತಿಮವಾಗಿ 50 ಮೈಕ್ರಾನ್‌ಗಿಂತ ಮೇಲ್ಪಟ್ಟ ಪ್ಯಾಕಿಂಗ್ ಪ್ಲಾಸ್ಟಿಕ್‌ಗೆ ಒಂದು ತಿಂಗಳ ಕಾಲಾವಕಾಶ ನೀಡಲು ಒಪ್ಪಿಗೆ ಸೂಚಿಸಲಾಯಿತು. ಉಳಿದ ಎಲ್ಲಾ ನಿಷೇಧಿತ ಪ್ಲಾಸ್ಟಿಕ್‌ನ್ನು ಇಂದಿನಿಂದಲೇ ನಿಷೇಧಿಸಿರುವ ವಿಚಾರ ಸಭೆಯಲ್ಲಿ ತಿಳಿಸಲಾಯಿತು.

ಫ್ಲೆಕ್ಸ್, ಬ್ಯಾನರಿಗೆ ಸಂಬಂಧಿಸಿ ಸಮಸ್ಯೆ ಬಗ್ಗೆ ಸರಕಾರ ಮಟ್ಟದಲ್ಲಿ ನಿಯೋಗ ತೆರಳಿ ಪರಿಹಾರಕ್ಕೆ ಪ್ರಯತ್ನಿಸಲಾಗುವುದು. ಅಲ್ಲಿಯವರೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸದ್ಯವೇ ಜಿಲ್ಲಾಧಿಕಾರಿ ಜೊತೆ ಮಾತುಕತೆ ನಡೆಸ ಲಾಗುವುದು ಎಂದು ರಘುಪತಿ ಭಟ್ ಫ್ಲೆಕ್ಸ್ ಮಾಲಕರಿಗೆ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News