ಅಕ್ರಮ ಮರಳು ಸಾಗಾಟ: ಮೂವರ ಬಂಧನ
Update: 2019-10-05 22:10 IST
ಹಿರಿಯಡ್ಕ, ಅ.5: ಬೆಳ್ಳಂಪಳ್ಳಿ ಗ್ರಾಮದ ಪುಣ್ಚೂರು ಹೊಳೆಯಿಂದ ಅ.4 ರಂದು ಸಂಜೆ ವೇಳೆ ಟೆಂಪೊದಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಮೂವರನ್ನು ಹಿರಿಯಡ್ಕ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಬೆಳ್ಳಂಪಳ್ಳಿ ಗ್ರಾಮದ ಮಧುಕರ ಪೂಜಾರಿ, ನಾಗರಾಜ ಶೆಟ್ಟಿ, ಗಿರೀಶ ಶೆಟ್ಟಿ ಎಂದು ಗುರುತಿಸಲಾಗಿದೆ. ಇವರು 407 ಟೆಂಪೊದಲ್ಲಿ ಮರಳನ್ನು ತುಂಬಿಸಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದು, ಈ ಬಗ್ಗೆ ಮಾಹಿತಿ ಪಡೆದು ದಾಳಿ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಇವರಿಂದ 5 ಸಾವಿರ ರೂ. ಮೌಲ್ಯದ 2 ಯುನಿಟ್ ಮರಳು ಹಾಗೂ 1.50 ಲಕ್ಷ ರೂ. ಮೌಲ್ಯದ 407 ಟೆಂಪೊವನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾ ಲಯ ಅ.18ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.