ಮೋದಿ ಭೇಟಿ ಸಂದರ್ಭ ಎನ್‌ಆರ್‌ಸಿ ವಿಷಯ ಪ್ರಸ್ತಾಪಿಸಿದ ಬಾಂಗ್ಲಾ ಪ್ರಧಾನಿ ಹಸೀನಾ

Update: 2019-10-05 18:13 GMT

 ಹೊಸದಿಲ್ಲಿ, ಅ.5: ಭಾರತಕ್ಕೆ ಭೇಟಿ ನೀಡಿರುವ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಶನಿವಾರ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದಾಗ ಅಸ್ಸಾಂನಲ್ಲಿ ಎನ್‌ಆರ್‌ಸಿ(ರಾಷ್ಟ್ರೀಯ ಪೌರತ್ವ ನೋಂದಣಿ) ಕುರಿತು ಆತಂಕ ವ್ಯಕ್ತಪಡಿಸಿದರು ಎಂದು ವರದಿಯಾಗಿದೆ.

 ನ್ಯಾಯಾಲಯದ ಉಸ್ತುವಾರಿಯಲ್ಲಿ ಎನ್‌ಆರ್‌ಸಿ ಪ್ರಕಟಿಸಲಾಗಿದೆ ಮತ್ತು ಈ ಪ್ರಕ್ರಿಯೆ ಇನ್ನೂ ಅಂತಿಮಗೊಂಡಿಲ್ಲ . ಎನ್‌ಆರ್‌ಸಿ ಎಂಬುದು ಅಸ್ಸಾಂನಲ್ಲಿ ನೆಲೆಸಿರುವ ವಾಸ್ತವಿಕ ಭಾರತೀಯರನ್ನು ಗುರುತಿಸುವ ಪ್ರಕ್ರಿಯೆಯಾಗಿದೆ ಎಂದು ಬಾಂಗ್ಲಾ ಪ್ರಧಾನಿಗೆ ಮಾಹಿತಿ ನೀಡಿರುವುದಾಗಿ ಭಾರತದ ಅಧಿಕಾರಿಗಳು ಹೇಳಿದ್ದಾರೆ. ವಿಶ್ವಸಂಸ್ಥೆಯ ಮಹಾ ಅಧಿವೇಶನದ ನೇಪಥ್ಯದಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾದಾಗ ಬಾಂಗ್ಲಾ ಪ್ರಧಾನಿ ಹಸೀನಾ ಎನ್‌ಆರ್‌ಸಿ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಇದಕ್ಕೆ ಉತ್ತರಿಸಿದ ಮೋದಿ, ಭಾರತ ಮತ್ತು ಬಾಂಗ್ಲಾ ನಡುವೆ ಉತ್ತಮ ಸಂಬಂಧವಿದೆ. ಆದ್ದರಿಂದ ಅಸ್ಸಾಂನಲ್ಲಿ ಅನುಷ್ಠಾನಗೊಂಡಿರುವ ಎನ್‌ಆರ್‌ಸಿ ಬಗ್ಗೆ ಬಾಂಗ್ಲಾದೇಶ ಆತಂಕಪಡಬೇಕಿಲ್ಲ ಎಂದು ಭರವಸೆ ನೀಡಿದ್ದರು ಎಂದು ವರದಿಯಾಗಿತ್ತು.

 ಭಾರತದ ಪ್ರಧಾನಿಯ ಭರವಸೆ ತನಗೆ ತೃಪ್ತಿ ನೀಡಿದೆ ಎಂದು ಗುರುವಾರವಷ್ಟೇ ಹಸೀನಾ ಹೇಳಿಕೆ ನೀಡಿರುವುದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News