×
Ad

​ಬುಲ್‌ಟ್ರಾಲ್, ನೈಟ್ ಫಿಶಿಂಗ್‌ಗೆ ಅನುಮತಿ ನೀಡಲ್ಲ: ಕೋಟ

Update: 2019-10-06 17:59 IST

ಮಂಗಳೂರು, ಅ.6: ಕರಾವಳಿಯ ಸಮುದ್ರದಲ್ಲಿ ಬುಲ್‌ಟ್ರಾಲ್ ಮತ್ತು ನೈಟ್ ಫಿಶಿಂಗ್ ಮೇಲೆ ನಿಷೇಧ ಹೇರಲಾಗಿದ್ದು, ಇಲಾಖೆಯು ನಿಯಮ ಮೀರಿ ಮೀನುಗಾರಿಕೆಗೆ ಅನುಮತಿ ನೀಡುವುದಿಲ್ಲ ಎಂದು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ನಗರದಲ್ಲಿ ನಡೆದ ಕಾರ್ಯಕ್ರಮವೊಂದರ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕರಾವಳಿಯಲ್ಲಿ ಬುಲ್ ಟ್ರಾಲ್ ಮತ್ತು ನೈಟ್ ಫಿಶಿಂಗ್‌ಗೆ ಕಾನೂನು ರೀತ್ಯ ಸಮ್ಮತಿ ಇಲ್ಲ. ಆದರೆ ಈ ವಿಚಾರದಲ್ಲಿ ಎರಡು ತಂಡಗಳು ಪರ-ವಿರೋಧ ಅಭಿಪ್ರಾಯ ವ್ಯಕ್ತಪಡಿಸುತ್ತಿವೆ. ಇದರಲ್ಲಿ ನಿಯಮ ಮೀರಿ ಅನುಮತಿ ನೀಡಲು ಮೀನುಗಾರಿಕಾ ಇಲಾಖೆಗೆ ಸಾಧ್ಯವಿಲ್ಲ. ಇಲ್ಲಿ ರಾಜಧರ್ಮವನ್ನು ಇಲಾಖೆ ಪಾಲಿಸಬೇಕಾಗಿದ್ದು, ಇದನ್ನು ಮೀನುಗಾರರು ಅರ್ಥಮಾಡಿಕೊಳ್ಳಬೇಕು ಎಂದರು.

ಸಮುದ್ರದಲ್ಲಿನ ಮೀನುಗಳ ಸಂತತಿ ಬೆಳವಣಿಗೆ ದೃಷ್ಟಿಯಿಂದ ಸರಕಾರ ನಿಷೇಧದ ಕ್ರಮ ಕೈಗೊಂಡಿದೆ. ಹಾಗಿರುವಾಗ ಪರಸ್ಪರ ತಂಡಗಳು ಹೊಂದಾಣಿಕೆಯಿಂದ ವರ್ತಿಸಿದರೆ, ಯಾವುದೇ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿದೆ. ನಾನು ವೈಯಕ್ತಿಕವಾಗಿಯೂ ಹಲವು ಬಾರಿ ಮುಖಂಡರಲ್ಲಿ ಮನವಿ ಮಾಡಿದ್ದೇನೆ. ಸರಕಾರಕ್ಕೆ ಸಂಘರ್ಷ ನಡೆಸುವುದು ಇಷ್ಟವಿಲ್ಲ. ಇದನ್ನು ನಾಡದೋಣಿ ಹಾಗೂ ಪರ್ಸಿನ್ ಬೋಟ್ ಮೀನುಗಾರರು ಅರ್ಥಮಾಡಿಕೊಳ್ಳಬೇಕು ಎಂದು ಸಚಿವರು ತಿಳಿಸಿದರು.

ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದ ನಲುಗಿದ ಪ್ರದೇಶಗಳಲ್ಲಿ ಪುನರ್ ಸ್ಥಾಪನೆ ಕೆಲಸವನ್ನು ಸರಕಾರವೇ ಕೈಗೆತ್ತಿಕೊಳ್ಳಲು ನಿರ್ಧರಿಸಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಸಂಭವಿಸಿದ ಪ್ರಾಕೃತಿಕ ದುರಂತದಿಂದ ಅನೇಕ ಮನೆ, ಸೊತ್ತು, ಆಸ್ತಿಪಾಸ್ತಿ ಹಾನಿಗೀಡಾಗಿವೆ. ಅವುಗಳನ್ನು ಸರಿಪಡಿಸುವ ಕೆಲಸಕ್ಕೆ ಸರಕಾರ ನೆರವು ನೀಡಲಿದೆ ಎಂದರು.

ಜಿಲ್ಲೆಯಲ್ಲಿ ಪರಿಹಾರ ಕಾರ್ಯ ನಡೆದಿದೆ. ಹೊಸ ಮನೆ ನಿರ್ಮಾಣಕ್ಕೆ ತಲಾ ಐದು ಲಕ್ಷ ರೂ., ಮನೆ ನಿರ್ಮಾಣವರೆಗೆ ಬಾಡಿಗೆ ಮನೆಯಲ್ಲಿ ವಾಸಿಸಲು ಮಾಸಿಕ ಐದು ಸಾವಿರ ರೂ. ನೀಡಲಾಗುತ್ತಿದೆ. ದಾಖಲೆಗಳ ವ್ಯತ್ಯಾಸವಿದ್ದರೆ, ರಾಜೀವ್ ಗಾಂಧಿ ನಿಗಮದಿಂದ ವಸತಿ ನಿರ್ಮಿಸಲಾಗುವುದು.

- ಕೋಟ ಶ್ರೀನಿವಾಸ್ ಪೂಜಾರಿ,
ಮೀನುಗಾರಿಕೆ, ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News