ಉಳ್ಳಾಲದಲ್ಲಿ ನಿಲ್ಲಿಸಿದ್ದ ಬಸ್ಸನ್ನು ಉಡುಪಿಗೆ ಕದ್ದೊಯ್ದ ಯುವಕ!

Update: 2019-10-06 14:13 GMT

ಉಳ್ಳಾಲ, ಅ.6: ಉಳ್ಳಾಲ ಪುರಸಭೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ಸೊಂದನ್ನು ಯುವಕನೋರ್ವ ಕದ್ದೊಯ್ದ ಘಟನೆ ಶನಿವಾರ ತಡರಾತ್ರಿ ನಡೆದಿದೆ.

ಯುವಕನೋರ್ವ ನಕಲಿ ಕೀ ಬಳಸಿ ಉಳ್ಳಾಲ ಪುರಸಭೆಯ ಮುಂಭಾಗದಲ್ಲಿ ನಿಲ್ಲಿಸಿದ ಬಸ್ ನ್ನು ಉಡುಪಿಯತ್ತ ಕೊಂಡೊಯ್ದಿದ್ದಾನೆ. ಮಂಗಳೂರು ಉಳ್ಳಾಲ ಕಡೆ ಸಂಚರಿಸುವ 44 ರೂಟ್ ನಂಬರ್‌ನ ಎ.ಆರ್. ಟ್ರಾವೆಲ್ಸ್‌ನ ಬಸ್ ಕಳವಾಗಿತ್ತು.

ರವಿವಾರ ಬೆಳಗ್ಗೆ ಎಂದಿನಂತೆ ಬಸ್ ಚಾಲಕ ಬಂದಾಗ ಯಾವಾಗಲೂ ನಿಲ್ಲಿಸುವ ಸ್ಥಳದಲ್ಲೇ ಬಸ್ ಇರಲಿಲ್ಲ. ಇದರಿಂದ ಆತಂಕಗೊಂಡ ಅವರು ಕೂಡಲೇ ಬಸ್ ಮಾಲಕನಿಗೆ ಮಾಹಿತಿ ನೀಡಿದರು. ಬಳಿಕ ಈ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡಲಾಯಿತು.

ಇದೇ ವೇಳೆ ಬಸ್ಸನ್ನು ಕದ್ದೊಯ್ದ ಯುವಕ ಅದನ್ನು ಚಲಾಯಿಸಿಕೊಂಡು ಹೆದ್ದಾರಿಯಾಗಿ ಉಡುಪಿಯತ್ತ ತೆರಳಿದ್ದಾನೆ. ಉಡುಪಿಯನ್ನು ದಾಟಿ ಸಂಚರಿಸುತ್ತಿದ್ದ ಮಂಗಳೂರು ಕಡೆಯ ನಾಮಫಲಕವನ್ನು ಹೊಂದಿದ್ದ ಬಸ್ ಅನ್ನು ಗಮನಿಸಿದ ಕೆಲವರು ಬಸ್ಸನ್ನು ತಡೆದು ನಿಲ್ಲಿಸಿದ್ದಾರೆ. ಈ ನಡುವೆ ಉಳ್ಳಾಲ ಕಡೆಯಿಂದ ಬಸ್ಸೊಂದು ಕಳವಾಗಿರುವ ಸುದ್ದಿ ಎಲ್ಲೆಡೆ ಹಬ್ಬಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯರು ಬಸ್ ಹಾಗೂ ಅದನ್ನು ಚಲಾಯಿಸುತ್ತಿದ್ದ ಯುವಕನನ್ನು ಉಡುಪಿ ಪೊಲೀಸ್ ವಶಕ್ಕೆ ಒಪ್ಪಿಸಿದ್ದಾರೆ. ಆರೋಪಿ ಯುವಕನನ್ನು ನಿಫಾಝ್ ಎಂದು ಗುರುತಿಸಲಾಗಿದೆ.

ಈ ನಡುವೆ ಬಸ್ ಮಾಲಕರಿಗೆ ಉಡುಪಿ ಪೊಲೀಸರು ಮಾಹಿತಿ ನೀಡಿದ್ದು, ಅವರು ಆಗಮಿಸಿ ಬಸ್ಸನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ.

ನಿಫಾಝ್ ಈ ಬಸ್ಸನ್ನು ಏಕೆ ಕೊಂಡೊಯ್ದಿದ್ದಾನೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News