ಕ್ರೀಡೆಯಿಂದ ಸ್ಪರ್ಧಾಳುಗಳ ಮಧ್ಯೆ ಏಕತೆ ಮೂಡಲು ಸಾಧ್ಯ: ಬಿಷಪ್ ಜೆರಾಲ್ಡ್ ಲೋಬೊ
ಉಡುಪಿ, ಅ.6: ಕ್ರೀಡಾಕೂಟಗಳು ಸ್ಪರ್ಧಾಳುಗಳ ನಡುವೆ ಏಕತೆ ಮತ್ತು ಸಮಗ್ರತೆಯನ್ನು ಮೂಡಿಸಲು ಸಹಕಾರಿಯಾಗುತ್ತದೆ. ಈ ಮೂಲಕ ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಕ್ರೀಡೆ ಮೂಡಿಸುತ್ತದೆ ಎಂದು ಉಡುಪಿ ಕೆಥೊಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದ್ದಾರೆ.
ಭಾರತೀಯ ಕೆಥೊಲಿಕ್ ಯುವ ಸಂಚಾಲನ ಉಡುಪಿ ಧರ್ಮಪ್ರಾಂತ್ಯದ ವತಿಯಿಂದ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ಕ್ರೀಡಾಂಗಣದಲ್ಲಿ ರವಿವಾರ ಆಯೋಜಿಸಲಾದ ಧರ್ಮಪ್ರಾಂತ್ಯ ಮಟ್ಟದ ಕ್ರೀಡಾಕೂಟ ‘ಯೂ ಲಂಪಿಕ್ಸ್ -2019’ ಉದ್ಘಾಟನಾ ಸಮಾರಂಭದ ಅಧ್ಯಕ್ಷೆ ವಹಿಸಿ ಅವರು ಮಾತನಾಡುತಿದ್ದರು
ಕ್ರೀಡೆ ಜೀವನದ ಒಂದು ಅವಿಭಾಜ್ಯ ಅಂಗ. ಸಂಪಾದನೆಗಿಂತ ಆರೋಗ್ಯ ಮುಖ್ಯ. ಹೀಗಾಗಿ ವಿದ್ಯಾಭ್ಯಾಸದೊಂದಿಗೆ ಕ್ರಿಡೆಯತ್ತ ಗಮನ ಹರಿಸಬೇಕು. ಕ್ರಿಡಾಪಟುಗಳು ಕಠಿಣ ಪರಿಶ್ರಮ ಪಟ್ಟರೆ ಮಾತ್ರ ಕ್ರಿಡೆಯಲ್ಲಿ ಸಾಧನೆ ಮಾಡಲು ಸಾಧ್ಯ. ಕ್ರಿಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯ ಎಂದು ಅವರು ತಿಳಿಸಿದರು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಕ್ರಿಡೆಯಲ್ಲಿ ಭಾಗವಹಿ ಸುವ ಪ್ರತಿಯೊಬ್ಬ ಸ್ಪರ್ಧಾಳು ಕ್ರಿಡಾ ಮನೋಭಾವದಿಂದ ಭಾಗವಹಿಸಬೇಕು. ಶಿಕ್ಷಣದೊಂದಿಗೆ ಕ್ರೀಡೆಗಳಿಗೂ ಹೆಚ್ಚಿನ ಮಹತ್ವ ನೀಡಿದರೆ ಮಾನಸಿಕ ಹಾಗೂ ದೈಹಿಕ ಸದೃಢತೆ ಉಂಟಾಗುತ್ತದೆ. ತಾಳ್ಮೆ, ಸಹನೆಯಿಂದ ಕ್ರೀಡೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು.
ಅಂತರಾಷ್ಟ್ರೀಯ ಪವರ್ ಲಿಫ್ಟರ್ ಜಾಕ್ಸನ್ ಡಿಸೋಜ ಕ್ರೀಡಾಜ್ಯೋತಿ ಬೆಳಗಿಸಿದರು. ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ಡಾ.ವಿನ್ಸೆಂಟ್ ಆಳ್ವ್ವ, ಐಸಿವೈಎಂ ಕೇಂದ್ರಿಯ ಸಮಿತಿಯ ನಿರ್ದೇಶಕ ವಂ.ಎಡ್ವಿನ್ ಡಿಸೋಜ ಉಪಸ್ಥಿತರಿದ್ದರು. ಐಸಿವೈಎಂ ಉಡುಪಿ ಧರ್ಮಪ್ರಾಂತ್ಯದ ಅಧ್ಯಕ್ಷ ಡಿಯೋನ್ ಡಿಸೋಜ ಸ್ವಾಗತಿಸಿದರು. ಆಶಿಶ್ ಮಿನೇಜಸ್ ವಂದಿಸಿದರು. ಮೆಲಿಶಾ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.
ಕ್ರೀಡಾಕೂಟದಲ್ಲಿ ಟ್ರ್ಯಾಕ್ ಮತ್ತು ಫಿಲ್ಡ್ ಸ್ಪರ್ಧೆಗಳಾದ 100, 200, 400, 800 ಮೀಟರ್ ಓಟ, ರಿಲೆ, ಲಾಂಗ್ ಜಂಪ್, ಹೈಜಂಪ್, ಶಾಟ್ಪುಟ್, ಡಿಸ್ಕಸ್ ಥ್ರೋ, ತಂಡಕೂಟಗಳಾದ ವಾಲಿಬಾಲ್, ಕಬಡ್ಡಿ, ತ್ರೋಬಾಲ್, ಬ್ಯಾಡ್ಮಿಂಟನ್, ಹಗ್ಗಜಗ್ಗಾಟ ಸ್ಪರ್ಧೆಗಳು ಜರಗಿದವು. ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.