ಉಡುಪಿ ಜಿಲ್ಲೆಯ 1302 ಮಂದಿಗೆ 103 ಕೋ.ರೂ. ಸಾಲ ವಿತರಣೆ
ಉಡುಪಿ, ಅ.6: ಉಡುಪಿ ಜಿಲ್ಲೆಯ ಲೀಡ್ ಬ್ಯಾಂಕ್ ಆಗಿರುವ ಸಿಂಡಿ ಕೇಟ್ ಬ್ಯಾಂಕಿನ ಆಶ್ರಯದಲ್ಲಿ ಸಾರ್ವಜನಿಕ ಮತ್ತು ಖಾಸಗಿ ರಂಗದ 23 ಬ್ಯಾಂಕ್‌ಗಳ ಸಹಯೋಗದೊಂದಿಗೆ ಮಣಿಪಾಲದ ಸಿಂಡಿಕೇಟ್ ಬ್ಯಾಂಕ್ ಗೋಲ್ಡನ್ ಜುಬಿಲಿ ಸಭಾಂಗಣದಲ್ಲಿ ಎರಡು ದಿನಗಳ ಕಾಲ ನಡೆದ ಗ್ರಾಹಕ ರನ್ನು ತಲುಪುವ(ಕಸ್ಟಮರ್ ಔಟ್‌ರೀಚ್) ಉಪಕ್ರಮದಲ್ಲಿ ಜಿಲ್ಲೆಯ 1302 ಫಲಾನುಭವಿಗಳಿಗೆ ಒಟ್ಟು 103 ಕೋಟಿ ರೂ. ಮೊತ್ತದ ವಿವಿಧ ರೀತಿಯ ಸಾಲ ಮಂಜೂರಾತಿ ಪತ್ರವನ್ನು ವಿತರಿಸಲಾಗಿದೆ ಎಂದು ಸಿಂಡಿಕೇಟ್ ಬ್ಯಾಂಕ್ ಮಣಿಪಾಲ ವಲಯ ಮಹಾ ಪ್ರಬಂಧಕ ಭಾಸ್ಕರ ಹಂದೆ ತಿಳಿಸಿದ್ದಾರೆ.
ಮಣಿಪಾಲದಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಕೇಂದ್ರ ವಿತ್ತ ಸಚಿವರ ಆದೇಶದಂತೆ ಜಿಲ್ಲೆಯ ಎಲ್ಲ ಬ್ಯಾಂಕ್ ಗಳು ಒಂದೆಡೆ ಸೇರಿ ಗ್ರಾಹಕರಿಗೆ ಬ್ಯಾಂಕಿನಿಂದ ಸಿಗುವ ಪ್ರತಿಯೊಂದು ಸೇವೆ ಮತ್ತು ಆರ್ಥಿಕ ಶಿಕ್ಷಣದ ಕುರಿತು ಮಾಹಿತಿ ನೀಡುವ ಉದ್ದೇಶದಿಂದ ಅ.5 ಮತ್ತು 6ರಂದು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಸುಮಾರು 1500 ಮಂದಿ ಗ್ರಾಹಕರು ಪಾಲ್ಗೊಂಡಿದ್ದರು ಎಂದರು.
ಸಾಲ ನೀಡುವಾಗ ಪಾಲಿಸುವ ನಿಯಮ ಬದ್ಧತೆಯಂತೆ ಗ್ರಾಹಕರಿಗೆ ಸಾಲ ವನ್ನು ನೀಡಲಾಗಿದೆ. 220 ಮಂದಿಗೆ 7 ಕೋಟಿ ರೂ. ಕೃಷಿಸಾಲ, 216 ಮಂದಿಗೆ 35ಕೋಟಿ ರೂ. ಗೃಹಸಾಲ, 140 ಮಂದಿಗೆ 8 ಕೋಟಿ ರೂ. ವಾಹನ ಸಾಲ, 105 ಮಂದಿಗೆ 8.5ಕೋಟಿ ರೂ. ಶಿಕ್ಷಣಸಾಲ, 195 ಮಂದಿಗೆ 16 ಕೋಟಿ ವೈಯಕ್ತಿಕ ಸಾಲ, ಸೂಕ್ಷ್ಮ, ಸಣ್ಣ, ಮಧ್ಯಮ ಉದ್ದಿಮೆಗೆ ಸಂಬಂಧಿಸಿ 186 ಫಲಾನುಭವಿಗಳಿಗೆ 20ಕೋಟಿ ರೂ., ಮುದ್ರಾ ಯೋಜನೆಯಡಿ 161 ಮಂದಿಗೆ 4ಕೋಟಿ ರೂ. ಸಾಲವನ್ನು ನೀಡಲಾಗಿದೆಂದು ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ಸಿಂಡಿಕೇಟ್ ಬ್ಯಾಂಕ್ ಒಂದರಿಂದಲೇ 440 ಫಲಾ ನುಭವಿಗಳಿಗೆ 32ಕೋಟಿ ರೂ., ಗ್ರಾಮೀಣ ವಿಕಾಸ ಬ್ಯಾಂಕಿನಿಂದ 160 ಮಂದಿಗೆ 3.5ಕೋಟಿ ರೂ. ಮತ್ತು ಕೆನರಾ ಬ್ಯಾಂಕಿನಿಂದ 240 ಮಂದಿಗೆ 6.5ಕೋಟಿ ರೂ. ಸಾಲ ಮಂಜೂರಾತಿ ನೀಡಲಾಗಿದೆ.
ಸಿಂಡಿಕೇಟ್ ಬ್ಯಾಂಕ್ ಮಣಿಪಾಲ ವಲಯ ವ್ಯಾಪ್ತಿಯ 11 ಜಿಲ್ಲೆಗಳ ಪೈಕಿ ದ.ಕ. ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಸಿಂಡಿಕೇಟ್ ಬ್ಯಾಂಕ್ ಲೀಡ್ ಬ್ಯಾಂಕ್ ಆಗಿದ್ದು, ಅಲ್ಲಿಯೂ ಇಂತಹ ಕಾರ್ಯಕ್ರಮ ನಡೆಸಲಾಗಿದೆ. ದ.ಕ. ಜಿಲ್ಲೆಯಲ್ಲಿ 1710 ಮಂದಿಗೆ 103 ಕೋಟಿ ರೂ. ಮತ್ತು ಬೆಳಗಾವಿ ಜಿಲ್ಲೆಯಲ್ಲಿ 535 ಮಂದಿಗೆ 26 ಕೋಟಿ ರೂ. ಸಾಲ ಮಂಜೂರಾತಿ ಪತ್ರವನ್ನು ನೀಡಲಾಗಿದೆ. ದ.ಕ. ಜಿಲ್ಲೆಯಲ್ಲಿ ಸಿಂಡಿಕೇಟ್ ಬ್ಯಾಂಕಿನಿಂದ 604 ಮಂದಿಗೆ 23ಕೋಟಿ ರೂ. ಮತ್ತು ಬೆಳಗಾವಿ ಜಿಲ್ಲೆಯಲ್ಲಿ 312 ಮಂದಿಗೆ 10ಕೋಟಿ ರೂ. ಸಾಲ ಒದಗಿಸ ಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಿಂಡಿಕೇಟ್ ಬ್ಯಾಂಕಿನ ಮಣಿಪಾಲ ವಲಯದ ಪರಿ ವೀಕ್ಷಣಾ ವಿಭಾಗದ ರಿಜಿಸ್ಟಾರ್ ಕಚೇರಿಯ ಮಹಾಪ್ರಬಂಧಕ ವಿ.ಎಂ. ಗಿರಿಧರ್, ಕೆನರಾ ಬ್ಯಾಂಕ್ ಉಡುಪಿ ವಲಯ ಕಚೇರಿಯ ಉಪಮಹಾ ಪ್ರಬಂಧಕ ಬಿ.ಪಿ.ನಂಜುಡಪ್ಪ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಪ್ರಾದೇಶಿಕ ಪ್ರಬಂಧಕ ರಮೇಶ್ ತುಂಗ, ಜಿಲ್ಲಾ ಲೀಡ್ ಬ್ಯಾಂಕ್‌ನ ಮುಖ್ಯಪ್ರಬಂಧಕ ರುದ್ರೇಶ್ ಉಪಸ್ಥಿತರಿದ್ದರು.