ಕೇಂದ್ರದ ಪರಿಹಾರ ಹಣ ಎಲ್ಲಿಗೂ ಸಾಕಾಗುವುದಿಲ್ಲ: ಮುತಾಲಿಕ್
ಉಡುಪಿ, ಅ.6: ಕೇಂದ್ರ ಸರಕಾರ ಕರ್ನಾಟಕಕ್ಕೆ ಬಿಡುಗಡೆ ಮಾಡಿರುವ ನೆರೆ ಪರಿಹಾರ ಮೊತ್ತ ಬಳಷ್ಟು ವಿಳಂಬವಾಗಿರುವುದು ಮಾತ್ರವಲ್ಲ ತುಂಬಾ ಕಡಿಮೆ ಆಗಿದೆ. ಇದು ಸಾಮಾನ್ಯ ಜನರಿಗೂ ಗಮನಕ್ಕೆ ಬರುತ್ತಿದೆ. ಆ ಬಗ್ಗೆ ಯಡಿಯೂರಪ್ಪನವರಿಗೆ ಬಹಳ ನೋವು ಇದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಉಡುಪಿ ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಳಕ್ಕೆ ರವಿವಾರ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಜನಪ್ರತಿನಿಧಿಗಳು ಪರಿಹಾರ ತರುವಲ್ಲಿ ಪೂರ್ಣ ಪ್ರಮಾಣದಲ್ಲಿ ಧುಮುಕಿದ್ದಾರೆ. ಆದರೆ ಕೇಂದ್ರದ ನಿಲುವು ಏನು ಎಂದು ಯಾರಿಗೂ ಗೊತ್ತಾಗುತ್ತಿಲ್ಲ. ಸರಕಾರದ ಪ್ರಕಾರ ರಾಜ್ಯದಲ್ಲಿ 30ಸಾವಿರ ಕೋಟಿ ರೂ. ನಷ್ಟವಾಗಿದೆ. ಆದುದರಿಂದ ಕೇಂದ್ರದ 1200ಕೋಟಿ ರೂ. ಪರಿಹಾ ಎಲ್ಲಿಗೂ ಸಾಕಾಗುವುದಿಲ್ಲ ಎಂದರು.
ಚಕ್ರವರ್ತಿ ಸೂಲಿಬೆಲೆಯನ್ನು ದೇಶದ್ರೋಹಿ ಎಂದು ಹೇಳಿರುವುದು ತಪ್ಪು. ಸಂಸದರ ಗೆಲುವಿನ ಹಿಂದೆ ಸೂಲಿಬೆಲೆ ಪರಿಶ್ರಮ ಇದೆ. ಸೂಲಿಬೆಲೆಗೆ ನೆರೆ ಪರಿಹಾರ ವಿಚಾರದಲ್ಲಿ ನೋವು ಇದೆ. ಅವರಿಗೆ ದೇಶದ್ರೋಹಿ ಪಟ್ಟ ಕಟ್ಟಿದ್ದು ಮೂರ್ಖತನ. ಸೂಲಿಬೆಲೆಯನ್ನು ನಾನು ಬೆಂಬಲಿಸುತ್ತೇನೆ ಎಂದು ಅವರು ತಿಳಿಸಿದರು.
ನಾನು ಕೂಡಾ 2000 ಇಸವಿಯಿಂದ ಮೋದಿ ಪರ ಭಾಷಣ ಮಾಡಿದ್ದೇನೆ. ರಾಜಕೀಯದವರು ತಮ್ಮ ಮೂಗಿನ ನೇರಕ್ಕೆ ಯೋಚಿಸುತ್ತಾರೆ. ಸಂಘಪರಿವಾರ ಇದನ್ನೆಲ್ಲಾ ಗಂಭೀರವಾಗಿ ಪರಿಗಣಿಸಬೇಕು. ನನ್ನನ್ನು ಮೂಲೆಗುಂಪು ಮಾಡುವ ಪ್ರಯತ್ನ ನಡೆದಿತ್ತು. ಸೂಲಿಬೆಲೆಯನ್ನು ಪಕ್ಕಕ್ಕೆ ಸರಿಸೋ ಪ್ರಯತ್ನ ಸರಿಯಲ್ಲ. ಈ ಮೂಲಕ ಅವರಿಗೆ ನೋವು ಕೊಡುವುದು ಸರಿಯಲ್ಲ ಎಂದು ಅವರು ಟೀಕಿಸಿದರು.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತದೆ. ಕೋರ್ಟ್ ತೀರ್ಪು ಬಗ್ಗೆ ನೂರಕ್ಕೆ ನೂರು ನಮಗೆ ವಿಶ್ವಾಸ ಇದೆ. 70 ವರ್ಷ ಕಾಂಗ್ರೆಸ್ ವ್ಯವಸ್ಥಿತವಾಗಿ ಕೇಸನ್ನು ಮುಚ್ಚಿ ಹಾಕಿತ್ತು. ಮುಸ್ಲಿಮರನ್ನು ಎತ್ತಿಕಟ್ಟುವ ಷಡ್ಯಂತ್ರ ಮಾಡಿತ್ತು. ಈಗ ಸುಪ್ರೀಂ ಕೋರ್ಟ್ ನ್ಯಾಯಾಮೂರ್ತಿಗಳು ಸರಿಯಾಗಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.
ದಸರಾ ವೇದಿಕೆಯಲ್ಲಿ ಚಂದ್ರನ್ ನಿವೇದಿತಾ ಪ್ರೇಮ ನಿವೇದನೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸರಕಾರಿ ವೇದಿಕೆಯಲ್ಲಿ ಪ್ರೇಮ ನಿವೇದನೆ ಮಾಡಬಾರ ದೆಂಬ ನಿಯಮ ಎಲ್ಲಿದೆ. ಅನಾವಶ್ಯಕವಾಗಿ ಇದನ್ನು ಎಳೆಯುತ್ತಿದ್ದಾರೆ. ಅವರ ಮೇಲೆ ಕೇಸು ಹಾಕಿರುವುದು ತಪ್ಪು. ಇದನ್ನು ಬಹಳ ದೊಡ್ಡ ಅಪರಾಧ ಎಂಬಂತೆ ಬಿಂಬಿಸುವುದು ಸರಿಯಲ್ಲ ಎಂದರು.
ಅ.13ರಂದು ನಡೆಯುವ ದತ್ತಮಾಲಾ ಅಭಿಯಾನದಲ್ಲಿ 5000 ಮಾಲಾ ಧಾರಿಗಳು ಭಾಗವಹಿಸುವ ನಿರೀಕ್ಷೆಯಿದೆ. ಶೋಭಯಾತ್ರೆ, ಧರ್ಮಸಭೆ ನಡೆಯುತ್ತದೆ. ದತ್ತಹೋಮ, ಗಣಹೋಮ ಕಾರ್ಯಕ್ರಮ ಇರುತ್ತದೆ. ಜಮ್ಮು ಕಾಶ್ಮೀರದ ರಾಹುಲ್ ಕೌಲ್ ಇದರಲ್ಲಿ ಭಾಗವಹಿಸಲಿರುವರು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ದೇವಳದ ಆಡಳಿತ ಧರ್ಮದರ್ಶಿ ನಿವಾಸ್ ಹೆಬ್ಬಾರ್, ಜೀಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ.ವಿಜಯೇಂದ್ರ, ಶ್ರೀ ರಾಮಸೇನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.