ಆರಂಭದಲ್ಲೇ ಸಮಸ್ಯೆಯನ್ನು ಬಗೆಹರಿಸಲು ಇ-ಸಿಗರೇಟ್ ನಿಷೇಧ: ಹರ್ಷವರ್ಧನ್

Update: 2019-10-06 15:50 GMT

ಹೊಸದಿಲ್ಲಿ, ಅ.6: ಇ-ಸಿಗರೇಟ್ ಸೇವನೆ ಯುವಕರಲ್ಲಿ ಸೋಂಕಿನಂತೆ ಹರಡುತ್ತಿದ್ದು ತಂಬಾಕು ಸೇವನೆ ನಿಯಂತ್ರಿಸುವ ಕೇಂದ್ರ ಸರಕಾರದ ಪ್ರಯತ್ನಕ್ಕೆ ಗಂಭೀರ ಸವಾಲೊಡ್ಡುವ ಸೂಚನೆ ನೀಡುತ್ತಿದ್ದ ಕಾರಣ ಸುಗ್ರೀವಾಜ್ಞೆ ಮೂಲಕ ಇ-ಸಿಗರೇಟ್ ಮೇಲೆ ನಿಷೇಧ ಹೇರಲಾಯಿತು ಎಂದು ಕೇಂದ್ರ ಆರೋಗ್ಯ ಸಚಿವ ಹಷವರ್ಧನ್ ತಿಳಿಸಿದ್ದಾರೆ.

ಇ-ಸಿಗರೇಟ್‌ನ ಬಳಕೆದಾರರ ಸಂಖ್ಯೆ ಬಹಳ ಕಡಿಮೆಯಿರುವ ಕಾರಣ ಈಗಲೇ ಅದರ ಮೇಲೆ ನಿಷೇಧ ಹೇರಿರುವುದು ಬಹಳ ಪರಿಣಾಮ ಬೀರಲಿದೆ. ಈ ಸಮಸ್ಯೆಯನ್ನು ಮೊಗ್ಗಿನಲ್ಲೇ ಚಿವುಟಿ ಹಾಕುವ ಉದ್ದೇಶದಿಂದಲೇ ಸುಗ್ರೀವಾಜ್ಞೆ ಹಾದಿಯನ್ನು ಆಯ್ಕೆ ಮಾಡಲಾಯಿತು ಎಂದು ಅವರು ತಿಳಿಸಿದ್ದಾರೆ. ನಿಷೇಧದ ಯಶಸ್ಸು ಬಳಕೆದಾರರ ಪ್ರಮಾಣದ ಮೇಲೆ ಅವಲಂಬಿತವಾಗಿದೆ. ಗ್ರಾಹಕರ ಪ್ರಮಾಣ ಹೆಚ್ಚಾಗಿದ್ದಷ್ಟು ಯಶಸ್ಸಿನ ದರ ಕಡಿಮೆಯಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

ಸರಕಾರ ಸೆಪ್ಟಂಬರ್ 18ರಂದು ಇ-ಸಿಗರೇಟ್ ಹಾಗೂ ಇದೇ ಮಾದರಿಯ ಇತರ ವಸ್ತುಗಳ ಉತ್ಪಾದನೆ, ಆಮದು, ರಫ್ತು, ಹಂಚಿಕೆ, ಸಾಗಾಟ,ಮಾರಾಟ, ಸಂಗ್ರಹ, ಬಳಕೆ ಮತ್ತು ಜಾಹೀರಾತಿ ಮೇಲೆ ನಿಷೇಧ ಹೇರಿದ್ದು ಈ ಆದೇಶವನ್ನು ಉಲ್ಲಂಘಿಸಿದರೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವುದಾಗಿ ಎಚ್ಚರಿಸಿತ್ತು. ಜಾಗತಿಕ ವಯಸ್ಕ ತಂಬಾಕು ಸಮೀಕ್ಷೆ 2016-17ನ್ನು ಉಲ್ಲೇಖಿಸಿದ ಹರ್ಷವರ್ಧನ್, ಭಾರತದಲ್ಲಿ 27 ಕೋಟಿ ವಯಸ್ಕ ತಂಬಾಕು ಬಳಕೆದಾರರಿದ್ದಾರೆ ಈ ಪೈಕಿ ಶೇ.0.02 ಮಂದಿ ಇ-ಸಿಗರೇಟ್ ಸೇದುತ್ತಾರೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News