ತ್ರಿವಳಿ ತಲಾಕ್ ಪ್ರಕರಣ: ಆರೋಪಿ ಪತಿ ಬಂಧನ
ಉಡುಪಿ, ಅ.6: ಇಂದ್ರಾಳಿ ದೇವಸ್ಥಾನ ರಸ್ತೆಯ ನಿವಾಸಿ ಶಬನಾ(43) ಉಡುಪಿ ಮಹಿಳಾ ಠಾಣೆಯಲ್ಲಿ ನೀಡಿದ ತ್ರಿವಳಿ ತಲಾಕ್ ದೂರಿನಂತೆ ಆರೋಪಿ ಪತಿ ಶಕೀಲ್ ಅಹಮ್ಮದ್(50) ಎಂಬಾತನನ್ನು ಪೊಲೀಸರು ಇಂದು ಬಂಧಿಸಿದ್ದಾರೆ.
ಇವರಿಬ್ಬರ ವಿವಾಹವು 2000ರ ಫೆ.22ರಂದು ನಡೆದಿದ್ದು, ಇವರಿಗೆ ಮೂವರು ಮಕ್ಕಳಿದ್ದಾರೆ. ಮದುವೆಯ ನಂತರ ಇವರಿಗೆ ಪತಿ ನಿರಂತರ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದರೆಂದು ದೂರಲಾಗಿದೆ. ಕಳೆದ 7 ವರ್ಷಗಳಿಂದ ಇವರು ಮಕ್ಕಳೊಂದಿಗೆ ಇಂದ್ರಾಳಿಯಲ್ಲಿ ವಾಸವಾಗಿದ್ದು, ಅಲಿ ಕೂಡ ಶಬನಾ ಮತ್ತು ಮಕ್ಕಳಿಗೆ ಆರೋಪಿ ವಿಚ್ಚೇದನೆ ನೀಡುವಂತೆ ಒತ್ತಾಯಿಸಿ ಹಲ್ಲೆ ನಡೆಸಿ, ಹಿಂಸೆ ನೀಡುತ್ತಿದ್ದರೆನ್ನಲಾಗಿದೆ.
2019ರ ಮಾರ್ಚ್ ತಿಂಗಳ ಕೊನೆಯಲ್ಲಿ ಶಬನಾ ಹಾಗೂ ಅವರ ಮಕ್ಕಳನ್ನು ಬಿಟ್ಟು ಹೋಗಿ ಪ್ರತ್ಯೇಕ ವಾಸ ಮಾಡಿಕೊಂಡಿದ್ದ ಶಕೀಲ್, ಸೆ.16 ರಂದು ಬೆಳಗ್ಗೆ 11.30ರ ಸುಮಾರಿಗೆ ಇಂದ್ರಾಳಿ ದೇವಸ್ಥಾನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಶಬನಾ ಅವರಿಗೆ ತಾನು ಬೇರೆ ಮದುವೆಯಾಗುವುದಾಗಿ ಹೇಳಿ ರಸ್ತೆಯ ಮಧ್ಯದಲ್ಲಿಯೇ ಕಾನೂನು ಬಾಹಿರವಾಗಿ ಮೂರು ಬಾರಿ ತಲಾಕ್ ಹೇಳಿ ಕೊಲೆ ಬೆದರಿಕೆಯೊಡ್ಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿ ಸಿದ್ದು, ನ್ಯಾಯಾಲಯ ಅ.19ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ. ತ್ರಿವಳಿ ತಲಾಕ್ ಜಾರಿಗೆ ಬಂದ ನಂತರ ಇದು ಉಡುಪಿಯಲ್ಲಿ ದಾಖಲಾಗುತ್ತಿರುವ ಎರಡನೆ ಪ್ರಕರಣವಾಗಿದೆ. ಕೆಲವು ತಿಂಗಳ ಹಿಂದೆ ಕುಂದಾ ಪುರದಲ್ಲಿ ಈ ಕುರಿತು ಪ್ರಕರಣ ದಾಖಲಾಗಿತ್ತು.