ಅ.16ರಂದು ‘ಆಶಾ ಕಿರಣ’ ಮೊದಲ ಬ್ಯಾಚ್ ಆರಂಭ
ಮಂಗಳೂರು, ಅ. 6: ರೌಡಿಶೀಟರ್ ಮತ್ತವರ ಮನೆಯವರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಮಂಗಳೂರು ಪೊಲೀಸ್ ಆಯುಕ್ತಾಲಯದ ವತಿಯಿಂದ ‘ಆಶಾ ಕಿರಣ’ ಎನ್ನುವ ವಿಶೇಷ ಘಟಕದಡಿಯಲ್ಲಿ ಸ್ಥಾಪಿಸಲಾದ ಯೋಜನೆಯ ಮೊದಲ ತರಬೇತಿ ಬ್ಯಾಚ್ ಅ.16ರಂದು ಬೋಂದೆಲ್‌ನ ಮಹಿಳಾ ಐಟಿಐ ಕಾಲೇಜಿನಲ್ಲಿ ಆರಂಭಗೊಳ್ಳಲಿದೆ.
ಮೊದಲ ಬ್ಯಾಚ್‌ಗೆ ಪೂರಕವಾಗಿ ಅದರ ಫಲಾನುಭವಿಗಳು ಹಾಗು ಪೊಲೀಸ್ ಅಧಿಕಾರಿಗಳೊಂದಿಗೆ ರವಿವಾರ ನಗರದಲ್ಲಿ ಸಮಾಲೋಚನೆ ನಡೆಯಿತು. ತರಬೇತಿಗೆ ಬೇಕಾದ ಪೂರ್ವ ಸಿದ್ಧತೆಗಳ ಬಗ್ಗೆ ಚರ್ಚಿಸಲಾಯಿತಲ್ಲದೆ, ತರಬೇತಿಗೆ ಸಂಬಂಧಿಸಿ ಫಲಾನುಭವಿಗಳಿಗೆ ಕೌಶಲಭಿವೃದ್ಧಿ ಅಧಿಕಾರಿಗಳು ಸೂಕ್ತ ಮಾರ್ಗದರ್ಶನ ನೀಡಿದರು.
ಮೊದಲ ಬ್ಯಾಚ್‌ನಲ್ಲಿ 30 ಮಂದಿಗೆ ತರಬೇತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಕಂಪ್ಯೂಟರ್ ಟ್ಯಾಲಿ, ಮಹಿಳೆಯರಿಗೆ ಬ್ಯೂಟಿ ಪಾರ್ಲರ್ ಹಾಗೂ ರೌಡಿ ಶೀಟರ್ ಮತ್ತವರ ಮನೆಯವರ ಶಿಕ್ಷಣಕ್ಕೆ ಅನುಗುಣವಾಗಿ ತರಬೇತಿ ನೀಡಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಡಾ.ಹರ್ಷ ಪಿ.ಎಸ್.ತಿಳಿಸಿದ್ದಾರೆ.
ಸರಕಾರದ ಕೌಶಲಭಿವೃದ್ಧಿ ಅಧಿಕಾರಿಗಳು ಈ ಯೋಜನೆಗೆ ಸಹಕಾರ ನೀಡಿದ್ದಾರೆ. ಮೊಲದ ಬ್ಯಾಚ್‌ನ ಸ್ಪಂದನೆ ನೋಡಿ ಎರಡನೇ ಬ್ಯಾಚ್ ಯಾವ ರೀತಿಯಲ್ಲಿ ಮಾಡಬಹುದು ಎಂಬುದನ್ನು ನಿರ್ಧರಿಸಲಾಗುವುದು. ಕಾನೂನಿಗೆ ವಿರೋಧವಾಗಿ ನಡೆಯುವವರಿಗೆ ಜೀವನ ಬದಲಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಡಾ. ಹರ್ಷ ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ ಪೊಲೀಸ್ ಆಯುಕ್ತ ಡಾ.ಹರ್ಷ ನಗರದ ಎಲ್ಲ ಠಾಣೆಗಳ ರೌಡಿಶೀಟರ್‌ಗಳನ್ನು ಕರೆಸಿ ರೌಡಿ ಪರೇಡ್ ಮೂಲಕ ವೈಯುಕ್ತಿಕವಾಗಿ ಅವರ ಜತೆ ಮಾತುಕತೆ ನಡೆಸಿದ್ದರು. ತಪ್ಪನ್ನು ತಿದ್ದಿಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬದುಕಲು ಅವರಿಗೆ ಹಾಗೂ ಅವರ ಕುಟುಂಬಸ್ಥರಿಗೆ ‘ಆಶಾ ಕಿರಣ‘ ಘಟಕ ಸ್ಥಾಪಿಸಿ ಉದ್ಯೋಗ ತರಬೇತಿ ನೀಡುವ ಯೋಜನೆಯನ್ನು ಈ ಸಂದರ್ಭ ಘೋಷಿಸಿದ್ದರು.