ಹೆದ್ದಾರಿ ಅವ್ಯವಸ್ಥೆ: ಉಚ್ಚಿಲದಿಂದ ಹೆಜಮಾಡಿಗೆ ಪಾದಯಾತ್ರೆ

Update: 2019-10-06 16:53 GMT

ಪಡುಬಿದ್ರಿ: ಹೆದ್ದಾರಿ ಕಾಮಗಾರಿಗಳ ಅಸಮರ್ಪಕ, ಅವೈಜ್ಞಾನಿಕ ನಿರ್ವಹಣೆ, ಸರ್ವೀಸ್ ರಸ್ತೆಗಳನ್ನು ಬೇಕಾದೆಡೆ ರಚಿಸದಿರುವುದು ಸಹಿತ ವಿವಿಧ ಬೇಡಿಕೆಗಳನ್ನು ಈಡೇರಿಕೆಗೆ ಒತ್ತಾಯಿಸಿ ಉಚ್ಚಿಲದಿಂದ ಹೆಜಮಾಡಿಯವರೆಗೆ ಪಾದಯಾತ್ರೆಯ ಮೂಲಕ ಜನಜಾಗೃತಿಯನ್ನು ಮೂಡಿಸಲು ನಿರ್ಧರಿಸಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಅಧ್ಯಕ್ಷ ದೇವಿಪ್ರಸಾದ ಶೆಟ್ಟಿ ಬೆಳಪು ತಿಳಿಸಿದ್ದಾರೆ.  

ಹೆದ್ದಾರಿ ನಿರ್ವಹಣೆಯನ್ನು ನಿರ್ದಿಷ್ಟ ಕಾಲಮಿತಿಯೊಳಗೆ ಮುಗಿಸುವ ಕುರಿತಾದ ಮಾತುಕತೆಗಳೂ ಹಿಂದಿನ ಜಿಲ್ಲಾಧಿಕಾರಿ, ಕುಂದಾಪುರ ಸಹಾಯಕ ಕಮಿಶನರ್, ಎಸ್ಪಿ ಸಹಿತ ಜನಪ್ರತಿನಿಧಿಗಳನ್ನೊಳಗೊಂಡಂತೆ ಉಡುಪಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದಿತ್ತು. ಇದೀಗ ಆ ಮಾತುಕತೆಯೂ ಮುರಿದುಬಿದ್ದಿದೆ. ಹೆದ್ದಾರಿ ಚತುಃಷ್ಪಥ ಕಾಮಗಾರಿಯಷ್ಟನ್ನೇ ಮಾಡಿ ಕೈತೊಳೆದುಕೊಂಡಿರುವ ನವಯುಗ ಕಂಪೆನಿಯು ಹೆದ್ದಾರಿಯಲ್ಲಿನ ಗುಂಡಿಗಳನ್ನೂ ಮುಚ್ಚದೇ ಕಣ್ಮುಚ್ಚಿ ಕುಳಿತಿದೆ. ಆರ್ಥಿಕ ಸಂಕಷ್ಟದ ನೆಪವೊಡ್ಡಿ ಕಾಮಗಾರಿಗಳಾವುದನ್ನೂ ನಿರ್ವಹಿಸದೇ ಕಾಲಹರಣಗೈಯ್ಯುತ್ತಿದೆ.

ಉಚ್ಚಿಲದಲ್ಲಿ ಮಾಡಬೇಕಿರುವ ಸರ್ವಿಸ್ ರಸ್ತೆ ನಿರ್ಮಾಣವಾಗಬೇಕು. ಪಡುಬಿದ್ರಿಯ ಸರ್ವಿಸ್ ರಸ್ತೆಗಳ ಕಾಮಗಾರಿಯನ್ನು ಪೂರ್ಣ ಗೊಳಿಸಬೇಕು. ಹೆಜಮಾಡಿ ಗ್ರಾಮ ಪ್ರವೇಶಕ್ಕಾಗಿ ಸುಜ್ಲಾನ್‍ಪ್ರವೇಶ ದ್ವಾರದ ಬಳಿಯಿಂದ ಸರ್ವೀಸ್ ರಸ್ತೆ ಅವಶ್ಯ ನಿರ್ಮಾಣವಾಗಬೇಕು. ಟೋಲ್ ಬಳಿ ಗ್ರಾಮಸ್ಥರಿಗೆ, ಶಾಲಾ ಮಕ್ಕಳಿಗೆ ಅನುಕೂಲವಾಗುವಂತೆ ಸ್ಕೈವಾಕ್‍ನಿರ್ಮಾಣ ಮಾಡದಿರುವುದು, ಮುಂತಾದ ಹಲವು ಬೇಡಿಕೆಗಳನ್ನು ಇನ್ನೂ ಈಡೇರಿಸಲಿಲ್ಲ ಎಂದು ಅವರು ಆರೋಪಿಸಿದ್ದಾರೆ.

ನವಯುಗ ನಿರ್ಮಾಣ ಕಂಪೆನಿಗೆ ಇದೀಗ ಸುಮಾರು 10ದಿನಗಳ ಕಾಲಾವಕಾಶಗಳನ್ನು ಈ ಎಲ್ಲಾ ಕಾಮಗಾರಿಗಳ ಸಮರ್ಪಕ ನಿರ್ವಹಣೆಗಾಗಿ ಜನತೆಯು ನೀಡುತ್ತದೆ. ಅದನ್ನೂ ನಿರ್ಲಕ್ಷಿಸಿ ಕಾಮಗಾರಿಗಳನ್ನೂ ನಿರ್ವಹಿಸದೇ ಕೇವಲ ಟೋಲ್ ಸುಲಿಗೆಯೇ ನಮ್ಮ ಪರಮ ಧ್ಯೇಯವೆಂದು ಭಾವಿಸಿ ಸುಮ್ಮನಿದ್ದಲ್ಲಿ ಜನಾಕ್ರೋಶವನ್ನು ಎದುರಿಸಲು ಸಿದ್ಧರಾಗಿರಿ ಎಂದೂ ಪರೋಕ್ಷವಾಗಿ ಜಿಲ್ಲಾಡಳಿತವನ್ನೂ, ಕಂಪೆನಿಯನ್ನು ದೇವಿ ಪ್ರಸಾದ್ ಶೆಟ್ಟಿ ಎಚ್ಚರಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News