ಜಾರ್ಖಂಡ್: ಗುಂಪಿನಿಂದ ಥಳಿಸಿ ಹತ್ಯೆ ಪ್ರಕರಣ; ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ರಸ್ತೆ ತಡೆ

Update: 2019-10-06 17:06 GMT

ರಾಂಚಿ, ಅ. 6: ಕೊಡಾರ್ಮದಲ್ಲಿ ಮಕ್ಕಳ ಅಪಹರಣಕಾರನೆಂಬ ಶಂಕೆಯಲ್ಲಿ ವ್ಯಕ್ತಿಯೋರ್ವನನ್ನು ಗುಂಪು ಥಳಿಸಿ ಹತ್ಯೆಗೈದಿರುವುದನ್ನು ಖಂಡಿಸಿ ಜನರು ಸಾಮೂಹಿಕ ಪ್ರತಿಭಟನೆ ನಡೆಸಿದ ಪರಿಣಾಮ ರಾಂಚಿ-ಪಾಟ್ನಾ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಹಲವು ಗಂಟೆಗಳ ಕಾಲ ಸ್ಥಗಿತಗೊಂಡಿತು.

ಗುಂಪಿನಿಂದ ಥಳಿತಕ್ಕೊಳಗಾಗಿ ಹತ್ಯೆಯಾದ ವ್ಯಕ್ತಿಯ ಸಂಬಂಧಿಕರು ಹಾಗೂ ಇತರರು ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಕೊಡೆರ್ಮಾ ಜಿಲ್ಲೆಯ ರಾಂಚಿ-ಪಾಟ್ನಾ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಘಟನಾ ಸ್ಥಳಕ್ಕೆ ಧಾವಿಸಿದ ಹಿರಿಯ ಅಧಿಕಾರಿಗಳು ಸಂಚಾರ ಸುಗಮಗೊಳಿಸಿದರು. ಅಲ್ಲದೆ, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ರಸ್ತೆ ತಡೆಯಿಂದ ನೂರಾರು ವಾಹನಗಳು ಗಂಟೆಗಳ ಕಾಲ ಸಂಚಾರ ಸ್ಥಗಿತಗೊಳಿಸಿದವು.

ಮಕ್ಕಳ ಅಪಹರಣಕಾರ ಎಂಬ ಶಂಕೆಯಿಂದ ಸುನೀಲ್ ಕುಮಾರ್ ಯಾದವ್‌ನನ್ನು ಶುಕ್ರವಾರ ಸಂಜೆ ಗುಂಪೊಂದು ಥಳಿಸಿತ್ತು. ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಯಾದವ್ ಶನಿವಾರ ಮೃತಪಟ್ಟಿದ್ದ. ಹಝಾರಿಬಾಘ್ ಜಿಲ್ಲೆಯ ನಿವಾಸಿಯಾಗಿರುವ ಯಾದವ್ ಕೊಡೆರ್ಮಾಕ್ಕೆ ಕೆಲಸ ನಿರ್ವಹಿಸಲು ತೆರಳುತ್ತಿದ್ದಾಗ ಈ ಘಟನೆ ನಡೆದಿತ್ತು.

ತನ್ನ ಸಹೋದರನನ್ನು ಮೂವರು ರೈಲ್ವೆ ಅಧಿಕಾರಿಗಳು ಥಳಿಸಿ ಹತ್ಯೆಗೈದಿದ್ದಾರೆ ಎಂದು ಆರೋಪಿಸಿ ಸುನೀಲ್ ಕುಮಾರ್ ಯಾದವ್‌ನ ಸಹೋದರ ದಿಲೀಪ್ ಕುಮಾರ್ ಎಫ್‌ಐಆರ್ ದಾಖಲಿಸಿದ್ದಾರೆ.

ಮಕ್ಕಳ ಅಪಹರಣಕಾರ ಎಂಬ ಶಂಕೆಯಲ್ಲಿ ಶುಕ್ರವಾರ ಸಂಜೆ ಸುನೀಲ್ ಕುಮಾರ್ ಯಾದವ್‌ನನ್ನು ರೈಲ್ವೆ ಕಾಲನಿಯಲ್ಲಿ ಜನರು ಗುಂಪೊಂದು ಹಿಡಿದು ಥಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News