ಕರಾವಳಿಯಲ್ಲಿ ‘ಆಯುಧ ಪೂಜೆ’ ಸಂಭ್ರಮ
ಮಂಗಳೂರು, ಅ.7: ನಗರ ಸಹಿತ ಕರಾವಳಿಯ ವಿವಿಧ ದೇವಸ್ಥಾನಗಳಲ್ಲಿ ನವರಾತ್ರಿ ಮಹೋತ್ಸವದ ವಿಜೃಂಭಣೆಯ ಮಧ್ಯೆಯೇ ಸೋಮವಾರ ಎಲ್ಲೆಡೆ ‘ಆಯುಧ ಪೂಜೆ’ಯ ಸಂಭ್ರಮ ಕಂಡು ಬಂತು.
ಸರಕಾರಿ ಮತ್ತು ಖಾಸಗಿ ಸಂಸ್ಥೆಗಳ ಕಚೇರಿ, ಅಂಗಡಿ, ಮಾಲ್ ಹಾಗೂ ಗ್ಯಾರೇಜ್ ಸಹಿತ ನಗರದ ಕುದ್ರೋಳಿ, ಕದ್ರಿ, ಮಂಗಳಾದೇವಿ, ಶರವು ದೇವಸ್ಥಾನಗಳ ಸಹಿತ ಎಲ್ಲೆಡೆ ಮುಂಜಾನೆಯಿಂದಲೇ ವಿಶೇಷ ಪೂಜೆ-ಪುನಸ್ಕಾರದೊಂದಿಗೆ ಹಬ್ಬದ ವಾತಾವರಣವಿದೆ.
ಸರಕಾರಿ ಮತ್ತು ಖಾಸಗಿ ಬಸ್‌ಗಳ ಸಹಿತ ಇತರ ವಾಹನಗಳನ್ನು ಹೂವಿನಿಂದ ಅಲಂಕರಿಸಲಾಗಿದೆ. ರವಿವಾರವೇ ಹೂ, ಹಣ್ಣು ಹಂಪಲು, ತರಕಾರಿ ಖರೀದಿಗೆ ಮುಗಿಬಿದ್ದಿದ್ದ ಗ್ರಾಹಕರು ಸೋಮವಾರ ಕೂಡಾ ಖರೀದಿ ಭರಾಟೆಯಲ್ಲಿ ತೊಡಗಿದ್ದಾರೆ. ರಸ್ತೆ ಬದಿ ಸೇವಂತಿಗೆ ಹೂವಿನ ಮಾರಾಟ ಬಿರುಸಾಗಿಯೇ ನಡೆಯುತ್ತಿವೆ. ಸೇವಂತಿಯ ಜೊತೆಗೆ ಮಲ್ಲಿಗೆ ಹೂವಿಗೂ ಹೆಚ್ಚು ಬೇಡಿಕೆ ಇದೆ ಎಂದು ಕಂಕನಾಡಿ ಹೂವಿನ ಮಾರುಕಟ್ಟೆಯ ವ್ಯಾಪಾರಿಯೊಬ್ಬರು ಹೇಳುತ್ತಾರೆ.
ಆಯುಧ ಪೂಜೆಗೆ ಲಿಂಬೆಹಣ್ಣು ಮತ್ತು ಹಸಿ ಮೆಣಸಿನ ಕಾಯಿಯನ್ನು ಹೆಚ್ಚಾಗಿ ಬಳಸಲಾಗುತ್ತಿದ್ದು, ರವಿವಾರದಂತೆ ಸೋಮವಾರ ಮುಂಜಾನೆಯೇ ಅವುಗಳ ಖರೀದಿಗೆ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು ಎಂದು ಕೇಂದ್ರ ಮಾರುಕಟ್ಟೆಯ ವ್ಯಾಪಾರಸ್ಥರು ತಿಳಿಸಿದ್ದಾರೆ.