ಮಂಗಳೂರು: ಶ್ರೀನಿವಾಸ್ ವಿವಿಯಲ್ಲಿ ರಾಷ್ಟ್ರೀಯ ವಿಚಾರ ಸಮ್ಮೇಳನ
ಮಂಗಳೂರು, ಅ. 5: ಪುಸ್ತಕಗಳನ್ನು ಓದಿದರೆ ಅದರೊಳಗಿನ ಜ್ಞಾನ ಮಾತ್ರ ದೊರಕುತ್ತದೆ. ಇತರರೊಂದಿಗೆ ಸಂವಹನ ಮಾಡಿದಾಗ ಅದು ಸಂಶೋಧನೆಗೆ ಒಂದು ನೆಲೆಯನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಹಾಗಾಗಿ ಪುಸ್ತಕಗಳನ್ನು ಓದುವುದರೊಂದಿಗೆ ಇತರರೊಂದಿಗೆ ಸಂವಹನ ಮಾಡುವ ಅಗತ್ಯವೂ ಇದೆ ಎಂದು ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಮಣಿಪಾಲ ಮಾಹೆಯ ಮಾಜಿ ನಿರ್ದೇಶಕ ಡಾ.ಕೆ.ವಿ.ಎಂ. ವಾರಂಬಳ್ಳಿ ಅಭಿಪ್ರಾಯಪಟ್ಟರು.
ನಗರದ ಪಾಂಡೇಶ್ವರದಲ್ಲಿರುವ ಶ್ರೀನಿವಾಸ್ ವಿವಿ ಸಿಟಿ ಕ್ಯಾಂಪಸ್‌ನಲ್ಲಿ ಶನಿವಾರ ನಡೆದ ‘ಚಲನಶೀಲತೆ, ಸ್ಥಿರತೆ ಮತ್ತು ಸುಸ್ಥಿರತೆ : ಸಮಾಜ ವಿಜ್ಞಾನ, ನಿರ್ವಹಣೆ, ಐಟಿ ಮತ್ತು ಶಿಕ್ಷಣದಲ್ಲಿ ಸವಾಲು’ ಎಂಬ ರಾಷ್ಟ್ರೋಯ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ನಮ್ಮ ಪೂರ್ವಜರು ಕೊಡುಗೆಯಾಗಿ ನೀಡಿದ ಸಮಾಜದಲ್ಲಿ ಇಂದು ನಾವು ಜೀವಿಸುತ್ತಿದ್ದೇವೆ. ಪರಿಸರವನ್ನು ಸುಸ್ಥಿರವಾಗಿಟ್ಟು ಮುಂದಿನ ಪೀಳಿಗೆಗೆ ಕೊಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಪ್ರತಿಯೊಂದು ಸಂಸ್ಥೆಯೂ ಕೂಡ ಪ್ರಕೃತಿಯನ್ನು ಸಂರಕ್ಷಿಸಲು ಪಣ ತೊಡಗಬೇಕು ಎಂದು ಡಾ.ಕೆ.ವಿ.ಎಂ. ವಾರಂಬಳ್ಳಿ ಹೇಳಿದರು.
ಶ್ರೀನಿವಾಸ್ ವಿವಿ ಕುಲಪತಿ ಡಾ. ಪಿ.ಎಸ್. ಐತಾಳ್ ಮಾತನಾಡಿ, ನ್ಯಾನೋ ತಂತ್ರಜ್ಞಾನದ ಜೊತೆಗೆ ಈಗಿರುವ ಸಾಂಪ್ರದಾಯಿಕ ತಂತ್ರಜ್ಞಾನವನ್ನು ಬಳಸಿ ಅವುಗಳನ್ನು ಸಂರಕ್ಷಿಸಬೇಕು ಎಂದು ಕರೆ ನೀಡಿದರು.
ಈ ಸಮ್ಮೇಳನದಲ್ಲಿ ಮಂಡಿಸಲ್ಪಡುವ ಸಂಶೋಧನಾ ಪ್ರಬಂಧಗಳ ಕೈಪಿಡಿ ಹಾಗೂ ಹಿಂದಿನ ಸಮ್ಮೇಳನದಲ್ಲಿ ಮಂಡಿಸಿದ ಸಮಗ್ರ ಪ್ರಬಂಧಗಳ ಪುಸ್ತಿಕೆಯನ್ನು ಬಿಡುಗಡೆಗೊಳಿಸಲಾಯಿತು.
ವೇದಿಕೆಯಲ್ಲಿ ಶ್ರೀನಿವಾಸ್ ಕಾಲೇಜ್ ಆಫ್ ಸೋಶಿಯಲ್ ಸೈಯನ್ಸ್ ಆ್ಯಂಡ್ ಹ್ಯುಮ್ಯಾನಿಟಿಸ್‌ನ ಡೀನ್ ಡಾ.ಲವೀನಾ ಡಿಮೆಲ್ಲೋ, ವಿಚಾರ ಸಮ್ಮೇಳನದ ಸಂಯೋಜಕ ಪ್ರೊ.ಪ್ರದೀಪ್ ಎಂ.ಡಿ. ಉಪಸ್ಥಿತರಿದ್ದರು. ಈ ವೇಳೆ ಎಂಎಸ್‌ಎನ್‌ಎಂನ ಮಾಜಿ ನಿರ್ದೇಶಕ ಡಾ. ನಾರಾಯಣ್ ಕಾಯರ್‌ಕಟ್ಟೆ, ವಿವಿ ಕಾಲೇಜಿನ ನಿವೃತ್ತ ಪ್ರೊ.ಡಾ.ಸಿ.ಕುಸುಮಾಕರ್ ಹೆಬ್ಬಾರ್, ನಿವೃತ್ತ ಪ್ರೊಫೆಸರ್ ಡಾ.ಪಿ.ಕೆ. ಸುರೇಶ್ ಕುಮಾರ್ ಉಪಸ್ಥಿತರಿದ್ದರು.
ಗುರುರಾಜ್ ಗೌಡ ವಂದಿಸಿದರು. ಡಾ. ವಿದ್ಯಾ ಕಾರ್ಯಕ್ರಮ ನಿರೂಪಿಸಿದರು.