×
Ad

ಕುಟುಂಬದ 6 ಜನರನ್ನು ಕೊಂದ ಸರಣಿ ಹಂತಕಿಯ ಬಗ್ಗೆ ಗ್ರಾಮಸ್ಥರು ಹೇಳಿದ ಸ್ಫೋಟಕ ಸತ್ಯಗಳಿವು...

Update: 2019-10-07 13:01 IST

ತಿರುವನಂತಪುರಂ, ಅ.7: ತನ್ನ ಮಾಜಿ ಪತಿ, ಆತನ ಹೆತ್ತವರು ಹಾಗೂ ಕುಟುಂಬದ ಇತರ ಮೂವರು ಸದಸ್ಯರನ್ನು 14 ವರ್ಷಗಳ ಅವಧಿಯಲ್ಲಿ ಯಾರಿಗೂ ಸಂಶಯ ಬಾರದಂತೆ ಆಹಾರದಲ್ಲಿ ಸಯನೈಡ್ ಬೆರೆಸಿ ಕೊಂದು ಕೊನೆಗೂ ಪೊಲೀಸರ ಅತಿಥಿಯಾಗಿರುವ 47  ವರ್ಷದ ಜಾಲಿ ಜೋಸೆಫ್ ಕುಟುಂಬದ ಆಸ್ತಿ ಕಬಳಿಸಿ ತನ್ನ ಸ್ನೇಹಿತನ ಜತೆ ಜೀವನ ನಡೆಸುವ ಇಚ್ಛೆಯಿಂದ ಇಷ್ಟೆಲ್ಲಾ ಕೊಲೆಗಳನ್ನು ಮಾಡಿದ್ದಳೆಂದು ತಿಳಿದು ಬಂದಿದೆ.

ಜಾಲಿ ಜೋಸೆಫ್ ಳ ಮಾಜಿ ಪತಿ ಜಾಯ್ ಥಾಮಸ್ ಗ್ರಾಮವಾದ ಕೂಡತಾಯಿಯ ಜನರಿಗೆ ಜಾಲಿ ಇಷ್ಟೆಲ್ಲಾ ಕೊಲೆಗಳನ್ನು ಮಾಡಿದ್ದಾಳೆಂದು ತಿಳಿದು ಆಘಾತವಾಗಿದೆ. ದೇವರ ಮೇಲೆ ಭಯಭಕ್ತಿ ಹೊಂದಿದ್ದವಳು, ಎಲ್ಲರೊಡನೆ ನಗುನಗುತ್ತಾ ಮಾತನಾಡುತ್ತಾ ಎಲ್ಲರ ಪ್ರೀತಿಗೆ ಪಾತ್ರಳಾಗಿದ್ದವಳು ಹಾಗೂ ಅಪಾರ ಸ್ನೇಹಿತರನ್ನು ಹೊಂದಿದ ಮಹಿಳೆ ಇಂತಹ ಘೋರ ಕೃತ್ಯವೆಸಗಿದ್ದಾಳೆಂಬುದನ್ನು ನಂಬಲು ಗ್ರಾಮದ ಜನತೆಗೆ ಸಾಧ್ಯವಾಗುತ್ತಿಲ್ಲ.

``ಕಳೆದ ವಾರವಷ್ಟೇ ರಿಟ್ರೀಟ್ ಸೆಂಟರ್ ನಲ್ಲಿ ಒಂದು ವಾರವಿದ್ದು ನಾವೆಲ್ಲರೂ ಮರಳಿದ್ದೆವು. ಆಕೆ ನಿಯಮಿತವಾಗಿ ತನ್ನ ಮನೆಯಲ್ಲಿ ಪ್ರಾರ್ಥನಾ ಕೂಟಗಳನ್ನು ನಡೆಸುತ್ತಿದ್ದಳು'' ಎಂದು ಜಾಲಿ ಇದ್ದ ಪ್ರಾರ್ಥನಾ ಗುಂಪಿನ ಸದಸ್ಯರಾದ ಪಿ ಜಾರ್ಜ್ ಹೇಳುತ್ತಾರೆ.

ಪೊಲೀಸರು ಆಕೆಯ ಮೊದಲ ಪತಿ ರಾಯ್ ಥಾಮಸ್ ಪ್ರಕರಣದ ಮರುತನಿಖೆ ನಡೆಸುತ್ತಿದ್ದಾರೆಂಬ ಸುದ್ದಿಯ ಬಗ್ಗೆ ಹೇಳಿದಾಗ ಆ ಬಗ್ಗೆ ತನಗೆ ಚಿಂತಿಸಲು ಏನೂ ಇಲ್ಲ ಎಂದು ಆಕೆ ಹೇಳಿದ್ದಳೆಂದು ಜಾರ್ಜ್ ನೆನಪಿಸುತ್ತಾರೆ.

2017ರಲ್ಲಿ ಆಕೆ  ಹೈಸ್ಕೂಲ್ ಶಿಕ್ಷಕ ಶಾಜು ಝಚರಿಯಾಸ್ ಎಂಬವರನ್ನು ವಿವಾಹವಾಗಿದ್ದಳು. "ರಾಯ್ ಮತ್ತವರ ಕುಟುಂಬ ಸದಸ್ಯರ ಸಮಾಧಿ ಬಳಿ ಆಗಾಗ ಹೋಗಿ ಹೂಗಳನ್ನಿಟ್ಟು ಕ್ಯಾಂಡಲ್ ಹೊತ್ತಿಸುತ್ತಿದ್ದಳು. ಧಾರ್ಮಿಕ ಮನೋಭಾವದ ಆಕೆ ರವಿವಾರದ ಪ್ರಾರ್ಥನೆ ತಪ್ಪಿಹೋದರೆ ಸಂಕಟ ಪಡುತ್ತಿದ್ದಳು'' ಎಂದು ಶಾಜು ಹೇಳುತ್ತಾರೆ.

ಇಡುಕ್ಕಿಯ ಕಟ್ಟಪ್ಪನ ಎಂಬಲ್ಲಿನ ನಿವಾಸಿಯಾಗಿರುವ ಜಾಲಿ 1997ರಲ್ಲಿ ರಾಯ್ ಜತೆ ಪ್ರೇಮ ವಿವಾಹವಾಗಿದ್ದಳು, ದಂಪತಿಗೆ  15 ಹಾಗೂ 21 ವರ್ಷದ ಇಬ್ಬರು ಪುತ್ರರಿದ್ದಾರೆ. ಅವರಿಬ್ಬರೂ ಕೊಚ್ಚಿಯಲ್ಲಿರುವ ತಮ್ಮ ತಂದೆಯ ಸೋದರಿ ಮನೆಯಲ್ಲಿದ್ದಾರೆ.

ವಾಸ್ತವವಾಗಿ ಬ್ಯೂಟಿ ಪಾರ್ಲರ್ ಒಂದರಲ್ಲಿ ಉದ್ಯೋಗಿಯಾಗಿದ್ದ ಆಕೆ ತಾನು ಕ್ಯಾಲಿಕಟ್ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇಲ್ಲಿನ ಶಿಕ್ಷಕಿ ಎಂದು ಎಲ್ಲರನ್ನೂ ನಂಬಿಸಿದ್ದಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News