ಸಂಧಾನಕ್ಕೆ ಬರುವಂತೆ ಇರಾಕ್ ಅಧ್ಯಕ್ಷರಿಂದ ಪ್ರತಿಭಟನಕಾರರಿಗೆ ಕರೆ

Update: 2019-10-08 18:28 GMT

ಬಗ್ದಾದ್, ಅ. 8: ಹಿಂಸಾತ್ಮಕ ಪ್ರತಿಭಟನೆಯನ್ನು ನಿಲ್ಲಿಸುವಂತೆ ಇರಾಕ್ ಅಧ್ಯಕ್ಷ ಬರ್ಹಾಮ್ ಸಾಲಿಹ್ ಸೋಮವಾರ ಪ್ರತಿಭಟನಕಾರರಿಗೆ ಕರೆ ನೀಡಿದ್ದಾರೆ ಹಾಗೂ ರಾಷ್ಟ್ರೀಯ ಸಂಧಾನ ಪ್ರಸ್ತಾಪವೊಂದನ್ನು ಮುಂದಿಟ್ಟಿದ್ದಾರೆ.

 ಒಂದು ವಾರದ ಹಿಂದೆ ಆರಂಭಗೊಂಡಿರುವ ಸರಕಾರ ವಿರೋಧಿ ಪ್ರತಿಭಟನೆಗಳು ದಿನೇ ದಿನೇ ತೀವ್ರಗೊಳ್ಳುತ್ತಿರುವಂತೆಯೇ ದೇಶದ ಅಧ್ಯಕ್ಷರು ಸಂಧಾನದ ಕೊಡುಗೆಯನ್ನು ನೀಡಿದ್ದಾರೆ. ಈವರೆಗೆ ಪ್ರತಿಭಟನೆಗಳಲ್ಲಿ 100ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.

ದೇಶದ ಜನರನ್ನು ಉದ್ದೇಶಿಸಿ ಟೆಲಿವಿಶನ್ ಭಾಷಣ ಮಾಡಿದ ಸಾಲಿಹ್, ಬೃಹತ್ ಸಭೆಗಳ ಸಂದರ್ಭದಲ್ಲಿ ಪ್ರತಿಭಟನಕಾರರು ಮತ್ತು ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಿದವರು ‘ಜನರ ಶತ್ರುಗಳು’ ಎಂದು ಬಣ್ಣಿಸಿದರು.

ಪೂರ್ವ ಬಗ್ದಾದ್‌ನಲ್ಲಿ ರವಿವಾರ ಸಂಜೆ ನಡೆದ ಪ್ರತಿಭಟನೆಗಳ ವೇಳೆ, ಪ್ರತಿಭಟನಕಾರರನ್ನು ಮಣಿಸಲು ‘ಅಧಿಕ ಬಲಪ್ರಯೋಗ’ ಮಾಡಿರುವುದನ್ನು ಸೇನೆ ಒಪ್ಪಿಕೊಂಡ ಗಂಟೆಗಳ ಬಳಿಕ ಅವರು ಈ ಭಾಷಣ ಮಾಡಿದ್ದಾರೆ.

‘‘ನಿಯಮಾವಳಿಗಳನ್ನು ಉಲ್ಲಂಘಿಸಿ ಅಧಿಕ ಬಲಪ್ರಯೋಗ ಮಾಡಲಾಗಿದೆ. ತಪ್ಪು ಮಾಡಿದ ಅಧಿಕಾರಿಗಳನ್ನು ಉತ್ತರದಾಯಿಗಳನ್ನಾಗಿ ಮಾಡುವ ಪ್ರಕ್ರಿಯೆಯನ್ನು ನಾವು ಕೈಗೆತ್ತಿಕೊಂಡಿದ್ದೇವೆ’’ ಎಂದು ಸೇನೆ ಹೇಳಿದೆ.

ಭ್ರಷ್ಟಾಚಾರ ಮತ್ತು ನಿರುದ್ಯೋಗದ ವಿರುದ್ಧ ಇರಾಕ್ ಜನರು ಭಾರೀ ಪ್ರಮಾಣದಲ್ಲಿ ಬೀದಿಗೆ ಇಳಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News