ಸರಕಾರಿ ಉದ್ಯೋಗಿಗಳಿಗೆ ಕೇಂದ್ರ ಸರಕಾರದಿಂದ ದೀಪಾವಳಿ ಉಡುಗೊರೆ

Update: 2019-10-09 10:31 GMT
ಪ್ರಕಾಶ್ ಜಾವ್ಡೇಕರ್

ಹೊಸದಿಲ್ಲಿ : ಸರಕಾರವು ಕೇಂದ್ರ ಸರಕಾರಿ ಉದ್ಯೋಗಿಗಳಿಗೆ ತುಟ್ಟಿಭತ್ಯೆಯನ್ನು ಶೇ 5ರಷ್ಟು  ಏರಿಸಿದ್ದು ಈಗಿನ ಶೇ 12ರಷ್ಟು ತುಟ್ಟಿಭತ್ಯೆ ಬದಲು ಇನ್ನು ಕೇಂದ್ರ ಸರಕಾರಿ ಉದ್ಯೋಗಿಗಳು ಶೇ 17ರಷ್ಟು ತುಟ್ಟಿಭತ್ಯೆ ಪಡೆಯಲಿದ್ದಾರೆ.

ಸಚಿವ ಸಂಪುಟ ಸಭೆಯ ಬಳಿಕ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಈ ಘೋಷಣೆ ಮಾಡಿದ್ದು ಸರಕಾರದ ಈ ನಿರ್ಧಾರ 50 ಲಕ್ಷ ಕೇಂದ್ರ ಸರಕಾರಿ ಉದ್ಯೋಗಿಗಳು ಹಾಗೂ 65 ಲಕ್ಷ ಪಿಂಚಣಿದಾರರಿಗೆ ಪ್ರಯೋಜನಕಾರಿಯಾಗಲಿದೆ.

ಈ ತುಟ್ಟಿಭತ್ಯೆ ಏರಿಕೆಯನ್ನು 'ದೀಪಾವಳಿ ಉಡುಗೊರೆ' ಎಂದು ಬಣ್ಣಿಸಿದ ಜಾವ್ಡೇಕರ್ ಇದರಿಂದಾಗಿ ಸರಕಾರದ ಬೊಕ್ಕಸಕ್ಕೆ 16,000 ಕೋಟಿ ರೂ. ಹೊರೆ ಬೀಳಲಿದೆ ಎಂದರು. ಕೇಂದ್ರ ಸರಕಾರ ಇದೇ ಮೊದಲ ಬಾರಿಗೆ ತುಟ್ಟಿಭತ್ಯೆಯನ್ನು ಶೇ 5ಕ್ಕೆ ಏರಿಸಿದೆ ಎಂದು ಸಚಿವರು ತಿಳಿಸಿದರು.

ಜಮ್ಮು ಕಾಶ್ಮೀರ ಹೊರತು ಪಡಿಸಿ ಇತರೆಡೆಗಳಲ್ಲಿ ನೆಲೆ ನಿಂತು ನಂತರ ಕಾಶ್ಮೀರ ಕಣಿವೆಗೆ ಮರಳಿರುವ  ಪಾಕ್ ಆಕ್ರಮಿತ ಕಾಶ್ಮೀರದ 5,300 ಕುಟುಂಬಗಳಿಗೆ ತಲಾ ರೂ 5.5 ಲಕ್ಷ ಒದಗಿಸಲಾಗುವುದು ಎಂದು ಸಚಿವರು ಹೇಳಿದರು.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅನ್ವಯ ಪ್ರಯೋಜನ ಪಡೆಯಲು ಆಧಾರ್ ಕಡ್ಡಾಯ ನಿಯಮಾವಳಿಗಳನ್ನು ಆಗಸ್ಟ್ 1ರ ತನಕ ಸಡಿಲಿಸಲಾಗುವುದೆಂದು ಈ ಹಿಂದೆ ಹೇಳಲಾಗಿದ್ದರೆ ಈಗ ಈ ಅವಧಿಯನ್ನು ನವೆಂಬರ್ 30ರ ತನಕ ವಿಸ್ತರಿಸಲಾಗಿದೆ ಎಂದು ಸಚಿವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News