8 ಬಿಲಿಯನ್ ಡಾಲರ್ ಪರಿಹಾರ ನೀಡಲು ಜಾನ್ಸನ್ & ಜಾನ್ಸನ್ ಕಂಪೆನಿಗೆ ಕೋರ್ಟ್ ಆದೇಶ

Update: 2019-10-09 10:46 GMT

ನ್ಯೂಯಾರ್ಕ್, ಅ.9: ಜಾನ್ಸನ್ & ಜಾನ್ಸನ್ ಕಂಪೆನಿ ತನ್ನ ಆ್ಯಂಟಿಸೈಕೋಟಿಕ್ (ಕೆಲವೊಂದು ಮಾನಸಿಕ ಕಾಯಿಲೆಗಳ) ಔಷಧಿ ರಿಸ್ಪೆರ್ಡಾಲ್ ಸೇವಿಸುವ ಯುವಕರಲ್ಲಿ ಸ್ತನಗಳ ಬೆಳವಣಿಗೆಯಾಗುವ ಸಾಧ್ಯತೆಯ ಬಗ್ಗೆ ಎಚ್ಚರಿಕೆ ನೀಡಿಲ್ಲ ಎಂದು  ಆರೋಪಿಸಿ ಪ್ರಕರಣ ದಾಖಲಿಸಿದ ವ್ಯಕ್ತಿಯೊಬ್ಬನಿಗೆ 8 ಬಿಲಿಯನ್ ಡಾಲರ್ ಪರಿಹಾರ ಪಾವತಿಸುವಂತೆ ಫಿಲೆಡೆಲ್ಫಿಯಾ ನ್ಯಾಯಾಲಯ ಕಂಪೆನಿಗೆ ಆದೇಶಿಸಿದೆ. ಈ ವ್ಯಕ್ತಿಗೆ ಈ ಹಿಂದೆ 6,800 ಡಾಲರ್ ಪಾವತಿಸಲು ಆದೇಶಿಸಲಾಗಿತ್ತು.

ನಿಕೋಲಾಸ್ ಮುರ್ರೆ ಎಂಬ ವ್ಯಕ್ತಿಯ ಪ್ರಕರಣ ಸಂಬಂಧಿಸಿದಂತೆ ಈ ಆದೇಶ ಹೊರಡಿಸಲಾಗಿದೆ. ಈ ಹಿಂದೆ ಪೆನ್ನಿಸಿಲ್ವೇನಿಯಾ ನ್ಯಾಯಾಲಯ ಆತನಿಗೆ ಪರಿಹಾರ ನೀಡಬೇಕೆಂದು ಹೇಳಿತ್ತು. ರಾಜ್ಯದಲ್ಲಿ ಇಂತಹ ಬಾಕಿಯಿರುವ ಸಾವಿರಾರು ಪ್ರಕರಣಗಳಲ್ಲಿ ಇದು ಒಂದಾಗಿದೆ.

ಸುರಕ್ಷತೆ ಹಾಗೂ ರೋಗಿಗಳ ಹಿತದೃಷ್ಟಿಗಿಂತಲೂ ಹೆಚ್ಚಾಗಿ  ತನ್ನ ಲಾಭಗಳ ಬಗ್ಗೆ ಯೋಚಿಸಿದ ಕಂಪೆನಿಯು ಬಾಧಿತ ವ್ಯಕ್ತಿಗೆ ಪರಿಹಾರ ನೀಡಬೇಕೆಂದು ನ್ಯಾಯಾಲಯ ಆದೇಶಿಸಿದೆ ಎಂದು ಮುರ್ರೆ ಅವರ ವಕೀಲರು ಹೇಳಿದ್ದಾರೆ.

ತಾನು ಅಪ್ರಾಪ್ತನಾಗಿದ್ದ ವೇಳೆ ತನಗೆ ಈ ಔಷಧಿಯನ್ನು ನೀಡಲಾದ ನಂತರ ತನ್ನ ಸ್ತನಗಳು ಬೆಳೆದಿದ್ದವು ಎಂದು ಮುರ್ರೆ ಆರೋಪಿಸಿದ್ದರು. ವಯಸ್ಕರಲ್ಲಿ ಸಿಝೋಫ್ರೇನಿಯಾ ಹಾಗೂ ಬೈಪೋಲಾರ್ ಮೇನಿಯಾ ಸಮಸ್ಯೆಗಳಿಗೆ ಈ ಔಷಧಿಯನ್ನು ಅಮೆರಿಕಾದ ಎಫ್‍ಡಿಎ ಈ ಔಷಧಿಯನ್ನು 1993ರಲ್ಲಿ ಅನುಮೋದಿಸಿತ್ತು.

ಮಾನಸಿಕ ವೈದ್ಯರೊಬ್ಬರು  ತನ್ನನ್ನು 2003ರಲ್ಲಿ ಪರೀಕ್ಷಿಸಿದ ನಂತರ ತನಗೆ ಆಟಿಸಂ ಸ್ಪೆಕ್ಟ್ರಂ ಸಮಸ್ಯೆಯಿದೆಯೆಂದು ಹೇಳಿ ಈ ಔಷಧಿಯನ್ನು ನೀಡಿದ್ದರು ಎಂದು ಈಗ 26 ವರ್ಷ ವಯಸ್ಸಿನ ಮುರ್ರೆ ಆರೋಪಿಸಿದ್ದಾರೆ.

ಈ ಪ್ರಕರಣದಲ್ಲಿ 2015ರಲ್ಲಿ ಒಂದು ನ್ಯಾಯಾಲಯ ಆತನಿಗೆ 1.75 ಮಿಲಿಯನ್ ಡಾಲರ್ ಪರಿಹಾರ ನೀಡುವಂತೆ ಕಂಪೆನಿಗೆ ಆದೇಶಿಸಿತ್ತು. ನಂತರ ರಾಜ್ಯ ಮಟ್ಟದ ನ್ಯಾಯಾಲಯ ಈ ಅಪೀಲನ್ನು ಫೆಬ್ರವರಿ 2018ರಲ್ಲಿ ಎತ್ತಿ ಹಿಡಿದರೂ ಪರಿಹಾರ ಮೊತ್ತವನ್ನು 6,80,000 ಡಾಲರ್ ಗೆ ಇಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News