ಚುನಾವಣಾ ಭರವಸೆ ಈಡೇರಿಸದ ಆರೋಪ: ಮೇಯರನ್ನು ಟ್ರಕ್ ಗೆ ಕಟ್ಟಿ ಎಳೆದೊಯ್ದ ಸ್ಥಳೀಯರು

Update: 2019-10-09 13:52 GMT

ಮೆಕ್ಸಿಕೋ, ಅ.9: ಚುನಾವಣೆ ಸಂದರ್ಭ ನೀಡಿದ್ದ ಭರವಸೆಯನ್ನು ಈಡೇರಿಸದ್ದಕ್ಕಾಗಿ ಮೇಯರ್ ಒಬ್ಬರನ್ನು ಸ್ಥಳೀಯ ರೈತರು ಕಚೇರಿಯಿಂದ ಹೊರಗೆಳೆದು, ಥಳಿಸಿ, ಟ್ರಕ್ ಗೆ ಕಟ್ಟಿ ಹಾಕಿ ಬೀದಿಯಲ್ಲಿ ಎಳೆದೊಯ್ದ ಘಟನೆ ಮೆಕ್ಸಿಕೋದಲ್ಲಿ ಸಂಭವಿಸಿದೆ. ಘಟನೆಗೆ ಸಂಬಂಧಿಸಿ 11 ಮಂದಿಯನ್ನು ಬಂಧಿಸಲಾಗಿದೆ.

ಪೊಲೀಸರು ಸ್ಥಳಕ್ಕೆ ಧಾವಿಸಿ ಮೇಯರ್ ಜಾರ್ಜ್ ಲೂಯಿಸ್ ಎಸ್ಕ್ಯಾಂಡೋನ್ ರನ್ನು ರಕ್ಷಿಸಿದರೂ ಅವರಿಗೆ ಗಂಭೀರ ಗಾಯಗಳಾಗಿವೆ. ಚುನಾವಣೆ ಸಂದರ್ಭ ನೀಡಿದ್ದ ಸ್ಥಳೀಯ ರಸ್ತೆಯ ದುರಸ್ತಿಯ ಭರವಸೆಯನ್ನು ಈಡೇರಿಸಿಲ್ಲ ಎಂದು ಮೇಯರ್ ಮೇಲೆ ನಡೆಯುತ್ತಿರುವ ಎರಡನೆ ದಾಳಿ ಇದಾಗಿದೆ.

ಕ್ರಿಮಿನಲ್ ಕೃತ್ಯಗಳಲ್ಲಿ ಸಹಕರಿಸದಿದ್ದರೆ ಮೆಕ್ಸಿಕೋದ ಮೇಯರ್ ಗಳು ಮತ್ತು ಸ್ಥಳೀಯ ರಾಜಕಾರಣಿಗಳ ಮೇಲೆ ಡ್ರಗ್ ಗ್ಯಾಂಗ್ ಗಳು ದಾಳಿ ನಡೆಸುವುದು ಸಾಮಾನ್ಯವಾಗಿದ್ದರೂ, ಚುನಾವಣಾ ಭರವಸೆ ಈಡೇರಿಸದ್ದಕ್ಕಾಗಿ ದಾಳಿ ನಡೆಯುತ್ತಿರುವುದು ಬಹಳ ವಿರಳ ಎನ್ನಲಾಗಿದೆ.

ಸ್ಥಳೀಯರು ಈ ಘಟನೆಯ ವಿಡಿಯೋ ಮಾಡಿದ್ದು, ಗುಂಪೊಂದು ಮೇಯರ್ ರನ್ನು ಕಚೇರಿಯಿಂದ ಹೊರಗೆಳೆದು ಟ್ರಕ್ ಹಿಂಭಾಗಕ್ಕೆ ಕಟ್ಟುವುದು ವಿಡಿಯೋದಲ್ಲಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News