ಮುದ್ರಾಡಿ: ನಾ.ದಾ.ಗೆ ಡಿ.ಕೆ.ಚೌಟ ಸಂಸ್ಮರಣ ಪ್ರಶಸ್ತಿ ಪ್ರದಾನ

Update: 2019-10-09 14:33 GMT

ಮುದ್ರಾಡಿ, ಅ.9: ನಾಡು ಕಂಡ ಹಿರಿಯ ರಂಗಕರ್ಮಿ ಡಿ.ಕೆ.ಚೌಟ ಅದ್ಬುತ ಚೇತನ.ಚೌಟರ ಮನೆತನ ಅದು ನಾಡಿಗೆ ಹತ್ತಿರ, ಅವರೆಲ್ಲರೂ ನಾಡಿಗೆ ವಿಶೇಷ ಸೇವೆ ಸಲ್ಲಿಸಿದ್ದಾರೆ. ರಂಗಭೂಮಿ ಇರುವಷ್ಟು ದಿನ ಚೌಟರ ಹೆಸರು ಉಳಿಯು ತ್ತದೆ. ಚೌಟರು ತುಳು ರಂಗಭೂಮಿಗೆ ನೀಡಿದ ಕೊಡುಗೆಯನ್ನು ಮರೆಯಲು ಸಾಧ್ಯವಿಲ್ಲ ಎಂದು ಖ್ಯಾತ ಸಾಹಿತಿ, ನಾಟಕಕಾರ ಮಂಗಳೂರಿನ ಡಾ.ನಾ. ದಾಮೋದರ ಶೆಟ್ಟಿ ಹೇಳಿದ್ದಾರೆ.

ಅವರು ಮುದ್ರಾಡಿ ನಾಟ್ಕದೂರು ನಮ ತುಳುವೆರ್ ಕಲಾ ಸಂಘಟನೆಯ ವತಿಯಿಂದ ನಾಟ್ಕದೂರಿನಲ್ಲಿ ನಡೆದ 9 ದಿನಗಳ ಅಖಿಲ ಭಾರತ 19ನೇ ನವರಂಗೋತ್ಸವದ ಸಂಪನ್ನ ಸಂಭ್ರಮದಲ್ಲಿ ಮಂಗಳವಾರ ಹಿರಿಯ ರಂಗ ಚೇತನ ಡಿ.ಕೆ.ಚೌಟ ಸಂಸ್ಮರಣೆಯಲ್ಲಿ ಮೊದಲ ಬಾರಿ ಘೋಷಿಸಲಾದ ಡಿ.ಕೆ.ಚೌಟ ಪ್ರಶಸ್ತಿಯ್ನು ಸ್ವೀಕರಿಸಿ ಮಾತನಾಡುತಿದ್ದರು.

ಇದೇ ಸಂದರ್ಭದಲ್ಲಿ ಯುವ ರಂಗ ನಟ, ನಿರ್ದೇಶಕ ರಾಯಚೂರಿನ ಪ್ರಭುರಾಜ್ ಅವರಿಗೆ ಬಿ.ವಿ.ಕಾರಂತ ಯುವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಭುರಾಜ್, ಶಾಲಾ ಮಕ್ಕಳಿಗೆ ಶಿಕ್ಷಣದಲ್ಲಿ ರಂಗಭೂಮಿ ಮತ್ತು ನಾಟಕದ ರಂಗಶಿಕ್ಷಣವನ್ನು ಅಳವಡಿಸುವ ಕೆಲಸ ಆದಾಗ ಮಾತ್ರ ರಂಗಭೂಮಿ ಉಳಿಯಲು ಸಾಧ್ಯವಾಗುತ್ತದೆ. ಅದಕ್ಕಾಗಿ ಹೋರಾಟಕ್ಕೆ ಇಳಿಯಬೇಕಾಗು ತ್ತದೆ. ಇಲ್ಲದಿದ್ದರೆ ಸಿನಿಮಾಗಳ ಸಂಗೀತದಲ್ಲೇ ಶಾಲಾ ಮಕ್ಕಳ ವಾರ್ಷಿಕೋತ್ಸವ ಮುಗಿದು ಬಿಡುತ್ತದೆ ಎಂದು ಆತಂಕ ವ್ಯಕ್ತ ಪಡಿಸಿದರು.

ದಿ.ಡಿ.ಕೆ.ಚೌಟರ ಸಹೋದರ ಕೃಷಿ ವಿಜ್ಞಾನಿ ಡಾ.ಚಂದ್ರಶೇಖರ ಚೌಟ ಮಾತನಾಡಿ, ಅಣ್ಣ ನಾಡಿಗೆ ನೀಡಿದ ಕೊಡುಗೆ ಮರೆಯಲು ಸಾಧ್ಯವಿಲ್ಲ. ನಮ್ಮ ಅಣ್ಣ ಒಬ್ಬ ಅದ್ಭುತ ಶಕ್ತಿ. ಚೌಟರಿಗೆ ಚೌಟರೇ ಸಾಕ್ಷಿ. ನಾನು ಇಡೀ ಕುಟುಂಬವೇ ರಂಗಭೂಮಿಗೆ ದುಡಿಯು ವುದನ್ನು ಮುದ್ರಾಡಿಯಲ್ಲಿ ಮಾತ್ರ ನೋಡಿದ್ದೇನೆ. ಮುದ್ರಾಡಿಯ ಮನೆಯೇ ಒಂದು ರಂಗಭೂಮಿ ಎಂದರು.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಅಧ್ಯಕ್ಷತೆ ವಹಿಸಿದ್ದರು. ಮುದ್ರಾಡಿ ಕ್ಷೇತ್ರದ ಧರ್ಮದರ್ಶಿ ಧರ್ಮಯೋಗಿ ಮೋಹನ್ ಆರ್ಶೀವಚನ ನೀಡಿದರು. ವಾಣಿ ಸುಕುಮಾರ್ ಮೋಹನ್, ಉಮೇಶ ಕಲ್ಮಾಡಿ, ಸುಧೀಂದ್ರ ಮೋಹನ್, ಸುಗಂಧಿ ಉಮೇಶ್ ಕಲ್ಮಾಡಿ, ಕಮಲಾ ಮೋಹನ್ ಮುಂತಾದವರು ಉಪಸ್ಥಿತರಿದ್ದರು.

ರಂಗನಿರ್ದೇಶಕ ಬೆಂಗಳೂರಿನ ಜಗದೀಶ ಜಾಲ ಕಾರ್ಯಕ್ರಮ ನಿರೂಪಿಸಿದರೆ ಸಂಸ್ಥೆಯ ಅಧ್ಯಕ್ಷ ಸುಕುಮಾರ್ ಮೋಹನ್ ಸ್ವಾಗತಿಸಿದರು. ಬಳಿಕ ಸಾಣೂರು ಅಂಬಾ ಯಕ್ಷ ಸಭಾ ಮತ್ತು ಜಿಲ್ಲೆಯ ಹೆಸರಾಂತ ಕಲಾವಿದರ ಕೂಡುವಿಕೆಯಿಂದ ವಿಭಿನ್ನ ಶೈಲಿಯ ಸಂಪೂರ್ಣ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನದ ಮೂಲಕ ನವರಂಗೋತ್ಸವ ಸಂಪನ್ನಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News