ಭೋಪಾಲ್ ದುರಂತ ಸಂತ್ರಸ್ತರಿಗೆ ಪರಿಹಾರ ವಿತರಣೆ ಸ್ಥಗಿತಗೊಳಿಸಿದ ಕೇಂದ್ರ ಸರಕಾರ: ವರದಿ

Update: 2019-10-09 14:49 GMT

 ಹೊಸದಿಲ್ಲಿ,ಅ.10: ಭೋಪಾಲ್ ವಿಷಾನಿಲ ದುರಂತದಲ್ಲಿ ಬದುಕುಳಿದವರಿಗೆ ಪರಿಹಾರಧನ ವಿತರಣೆಯನ್ನು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವಾಲಯವು ಸ್ಥಗಿತಗೊಳಿಸಿದೆ. 629 ಪ್ರಕರಣಗಳಲ್ಲಿ ಸಂತ್ರಸ್ತರಿಗೆ 61.72 ಕೋಟಿ ರೂ. ಪರಿಹಾರ ವಿತರಣೆಗೆ ಅನುಮೋದನೆ ದೊರೆಯುವ ಅಗತ್ಯವಿದೆಯೆಂದು 2019ರ ಫೆಬ್ರವರಿಯಲ್ಲಿ ಸಚಿವಾಲಯವು ಬಿಡುಗಡೆಗೊಳಿಸಿದ ಪತ್ರವೊಂದು ತಿಳಿಸಿದೆ.

ದಿ ಹಿಂದೂ ಪತ್ರಿಕೆಯು ಪ್ರಕಟಿಸಿದ ವರದಿಯ ಪ್ರಕಾರ, ಭೋಪಾಲ್ ವಿಷಾನಿಲ ದುರಂತದ ಸಂತ್ರಸ್ತರಿಗೆ ಪರಿಹಾರ ವಿತರಿಸಲು ಕೇಂದ್ರ ಸರಕಾರಕ್ಕೆ ಹಣಕಾಸು ನಿಧಿಯ ಕೊರತೆಯುಂಟಾಗಿದೆ. 2018ರ ಜುಲೈನಲ್ಲಿ ಭೋಪಾಲ್‌ನಲ್ಲಿರುವ ಕೇಂದ್ರ ಸರಕಾರದ ಕಲ್ಯಾಣ ಆಯುಕ್ತರ ಕಚೇರಿಯು,ಪರಿಹಾರಕ್ಕಾಗಿ ಹೆಚ್ಚುವರಿ 3629 ಹೆಚ್ಚುವರಿ ಪ್ರಕರಣಗಳನ್ನು ಸೇರ್ಪಡೆಗೊಳಿಸುವ ಪ್ರಸ್ತಾವವನ್ನು ಸಲ್ಲಿಸಿತ್ತು. ಆದರೆ ಕೇಂದ್ರ ಸರಕಾರವು ಈ ಮನವಿಗೆ ಅನುಸಾರವಾಗಿ ಕಾರ್ಯ ಪ್ರವೃತ್ತವಾಗಲಿಲ್ಲವೆಂದು ವರದಿಯು ಹೇಳಿದೆ.

 ಶಾಶ್ವತ ಹಾಗೂ ಭಾಗಶಃ ಅಂಗವಕಲ್ಯಕ್ಕೆ ತುತ್ತಾದ 200ಕ್ಕೂ ಅಧಿಕ ಪ್ರಕರಣಗಳಲ್ಲಿ ಪರಿಹಾರ ನೀಡಲು ಅನುಮೋದನೆ ದೊರೆತಿದೆ. ಆದರೆ ಅವರಿಗೆ ಇನ್ನೂ ಪರಿಹಾರ ಧನ ಪಾವತಿಯಾಗಿಲ್ಲವೆಂದು ದಿ ಹಿಂದೂ ಪತ್ರಿಕೆಯ ವರದಿ ತಿಳಿಸಿದೆ.

  2010ರ ಸಾಲಿನಲ್ಲಿ ಸಚಿವಾಲಯವು 874.28 ಕೋಟಿ ರೂ.ಗಳನ್ನು ಪರಿಹಾರಧನವಾಗಿ ಮೀಸಲಿರಿಸಿತ್ತು. ಆದರೆ ಪರಿಹಾರಕ್ಕಾಗಿ ಮೀಸಲಿಟ್ಟಿರುವ ಹಣಕಾಸು ನಿಧಿಯು ತ್ವರಿತವಾಗಿ ಖಾಲಿಯಾಗುತ್ತಿದೆಯೆಂದು ರಾಸಾಯನಿಕ ಹಾಗೂ ರಸಗೊಬ್ಬರ ಕುರಿತ ಸ್ಥಾಯಿಸಮಿತಿ ವರದಿಯೊಂದು ಒಪ್ಪಿಕೊಂಡಿದೆ.

    1984ರ ಭೋಪಾಲ್ ದುರಂತ ಸಂಭವಿಸಿದಾಗಿನಿಂದ ಸುಮಾರು 50 ಸಾವಿರ ಮಂದಿ ಸಂತ್ರಸ್ತರಿಗೆ ಪರಿಹಾರ ನೀಡಲಾಗಿದೆ. ಆದರೆ ಇನ್ನೂ 48 ಸಾವಿರ ಸಂತ್ರಸ್ತರಿಗೆ ಪರಿಹಾರಧನವನ್ನು ದೊರೆತಿಲ್ಲ. ಎಲ್ಲ ಸಂತ್ರಸ್ತರಿಗೂ ಸೂಕ್ತವಾದ ಪರಿಹಾರವನ್ನು ಒದಗಿಸಲು ಕೇಂದ್ರ ಸರಕಾರವು ಪೇಚಾಡುತ್ತಿದೆಯೆಂದು ಭೋಪಾಲ್‌ನ ನ್ಯಾಯಕ್ಕಾಗಿನ ಅಂತಾರಾಷ್ಟ್ರೀಯ ಅಭಿಯಾನ ಸಂಸ್ಥೆಯ ಕಾರ್ಯಕರ್ತೆ ರಚನಾ ಧಿಂಗ್ರಾ ದಿ ಹಿಂದೂ ಪತ್ರಿಕೆಗೆ ತಿಳಿಸಿದ್ದಾರೆ.

 ಭೋಪಾಲ್ ದುರಂತ ಸ್ಮಾರಕ ಆಸ್ಪತ್ರೆ ಟ್ರಸ್ಟ್ (ಬಿಎಂಎಚ್‌ಟಿ)ಗೆ ಮೀಸಲಿಡಲಾಗಿದ್ದ 891 ಕೋಟಿ ರೂ.ಗಳ ಕಾರ್ಪಸ್ ನಿಧಿಯನ್ನು ಸಂತ್ರಸ್ತರಿಗೆ ಪರಿಹಾರಧನ ಪಾವತಿಸಲು ಬಳಸಿಕೊಳ್ಳುವ ಬಗ್ಗೆ ಕೇಂದ್ರ ಸರಕಾರವು ಜೂನ್‌ನಲ್ಲಿ ನಡೆಸಲಾದ ಪರಾಮರ್ಶನಾ ಸಭೆಯಲ್ಲಿ ಚಿಂತಿಸಲಾಗಿತ್ತು. ಆದಾಗ್ಯೂ, ನಿಧಿ ವರ್ಗಾವಣೆಗೆ ಸಂಪುಟದ ಅನುಮೋದನೆ ದೊರೆಯಲು ಇನ್ನೂ ಬಾಕಿಯಿದೆ. ಬಿಎಂಎಚ್‌ಟಿಯನ್ನು ವಿಸರ್ಜಿಸಲು ಕೇಂದ್ರ ಕಾನೂನು ಸಚಿವಾಲಯದ ಜೊತೆ ಸಮಾಲೋಚನೆ ನಡೆಸಬೇಕಾಗಿದೆಯೆಂದು ಪರಾಮರ್ಶನಾ ಸಭೆಯ ವಿವರಣೆಯು ತಿಳಿಸಿವೆ.

ಆದಾಗ್ಯೂ ಬಿಎಂಎಚ್‌ಟಿಯ ವಿಸರ್ಜನೆಗೆ ಸುಪ್ರೀಂಕೋರ್ಟ್‌ನ ಅಂಗೀಕಾರ ದೊರೆಯಬೇಕಾದ ಅಗತ್ಯವಿದೆಯೆಂದು ಭೋಪಾಲ್ ಸಂತ್ರಸ್ತರ ಪರ ಹೋರಾಟಗಾರರು ತಿಳಿಸಿದ್ದಾರೆ. ಸುಪ್ರೀಂಕೋರ್ಟ್‌ನ ಅನುಮೋದನೆಯ ಮೇರೆಗೆ ಬಿಎಂಎಚ್‌ಟಿ ನಿಧಿಯನ್ನು ಸ್ಥಾಪಿಸಲಾಗಿದ್ದು, ಅದನ್ನು ವೈದ್ಯಕೀಯೇತರ ಉದ್ದೇಶಗಳಿಗಾಗಿ ಬಳಸುವಂತಿಲ್ಲವೆಂದು ಧಿಂಗ್ರಾ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News