ಫರಂಗಿಪೇಟೆ: ಜೋಡಿ ಕೊಲೆ ಪ್ರಕರಣ; ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

Update: 2019-10-09 15:26 GMT

ಬಂಟ್ವಾಳ, ಅ. 9: ಫರಂಗಿಪೇಟೆಯಲ್ಲಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಎರಡು ವರ್ಷಗಳಿಂದ ತಲೆಮರೆಸಿ ಕೊಂಡಿದ್ದ ಆರೋಪಿಯೋರ್ವನನ್ನು ಬಂಟ್ವಾಳದ ಪೊಲೀಸರು ಮಂಗಳೂರಿನ ಕಂಕನಾಡಿಯಲ್ಲಿ ಬಂಧಿಸಿದ್ದಾರೆ.

ಮಾರಿಪಳ್ಳ ನಿವಾಸಿ ಜಬ್ಬಾರ್ ತಲೆಮರೆಸಿಕೊಂಡಿದ್ದ ಆರೋಪಿಯಾಗಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಘಟನೆಯ ಹಿನ್ನೆಲೆ

2017ರ ಸೆ. 25ರಂದು ರಾತ್ರಿ ಫರಂಗಿಪೇಟೆ ಹೊಟೇಲೊಂದರ ಮುಂಭಾಗದಲ್ಲಿ ಕಣ್ಣೂರಿನ ಝಿಯಾ ಗ್ಯಾಂಗ್ ಮತ್ತು ಮಾರಿಪಳ್ಳದ ಜಬ್ಬಾರ್ ಗ್ಯಾಂಗ್‍ನ ಮಧ್ಯೆ ನಡೆದ ಗ್ಯಾಂಗ್‍ವಾರ್ ನಲ್ಲಿ ಝಿಯಾ ಯಾನೆ ರಿಯಾಝ್ ಹಾಗೂ ಫಯಾಝ್ ಎಂಬವರು ಕೊಲೆಯಾಗಿದ್ದರು. ಉಳಿದಂತೆ ಝಿಯಾ ಗ್ಯಾಂಗ್‍ನ ಕೆಲವರು ಗಾಯಗೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಜಬ್ಬಾರ್ ಗ್ಯಾಂಗ್‍ನ 12 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಆದರೆ, ಪ್ರಕರಣದ 13ನೇ ಆರೋಪಿಯಾಗಿದ್ದ ಜಬ್ಬಾರ್ ವಿದೇಶಕ್ಕೆ ತೆರಳಿ ತಲೆಮರೆಸಿಕೊಂಡಿದ್ದ.

ಎರಡು ವರ್ಷಗಳ ಬಳಿಕ ನೇಪಾಳದ ಮೂಲಕ ಭಾರತಕ್ಕೆ ಬಂದು ಕಂಕನಾಡಿಯಲ್ಲಿ ವಾಸವಾಗಿದ್ದ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಬಂಟ್ವಾಳ ಎಎಸ್ಪಿ ಸೈದುಲು ಅಡಾವತ್ ಅವರ ಮಾರ್ಗದರ್ಶನದಂತೆ ಬಂಟ್ವಾಳ ವೃತ್ತ ನಿರೀಕ್ಷಕ ಟಿ. ಡಿ.ನಾಗರಾಜ್, ಬಂಟ್ವಾಳ ಗ್ರಾಮಾಂತರ ಠಾಣಾ ಎಸ್ಸೈ ಪ್ರಸನ್ನ ನೇತೃತ್ವದ ತಂಡವು ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ನ್ಯಾಯಾಲಯವು ಆರೋಪಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News