ಸಂವಿಧಾನ ವಿರೋಧಿ ಪದ ಬಳಸಿ ಕೋಮುಗಲಭೆಗೆ ಯತ್ನಿಸುತ್ತಿರುವ ಸಂಘಪರಿವಾರ: ಎಸ್‌ಡಿಪಿಐ

Update: 2019-10-09 16:40 GMT

ಮಂಗಳೂರು, ಅ.9: ಉಳ್ಳಾಲ ಮತ್ತು ಕೈರಂಗಳದಲ್ಲಿ ಧಾರ್ಮಿಕ ಕಾರ್ಯಕ್ರಮದ ಹೆಸರಿಟ್ಟು ಜಾತ್ಯಾತೀತ ರಾಷ್ಟ್ರದಲ್ಲಿ ‘ಹಿಂದೂರಾಷ್ಟ್ರ’ ಎಂಬ ಸಂವಿಧಾನ ವಿರೋಧಿ ಪದ ಬಳಕೆ ಮಾಡಿ ಜಾತಿ ಧರ್ಮಗಳ ಮಧ್ಯೆ ಸಂಘಪರಿವಾರ ವೈಷಮ್ಯ ಮೂಡಿಸಿ ಜಿಲ್ಲೆಯಲ್ಲಿ ಅಶಾಂತಿ ಮೂಡಿಸಲು ಯತ್ನಿಸುತ್ತಿರುವುದಾಗಿ ಎಸ್‌ಡಿಪಿಐ ಆರೋಪಿಸಿದ್ದು, ಘಟನೆಯನ್ನು ಖಂಡಿಸಿದೆ.

‘ಸಂಘಪರಿವಾರದಿಂದ ‘ಹಿಂದೂರಾಷ್ಟ್ರ’ ಎಂಬ ಪದವನ್ನು ಈ ಹಿಂದೆಯೂ ಬ್ಯಾನರ್ ಮತ್ತು ಧ್ವಜಗಳಲ್ಲಿ ಮುದ್ರಿಸಿ ಜಿಲ್ಲೆಯಲ್ಲಿ ಅಶಾಂತಿ ಮೂಡಿಸಲು ಯತ್ನಿಸಲಾಗಿತ್ತು. ಈ ಬಗ್ಗೆ ಎಸ್‌ಡಿಪಿಐ ಪೊಲೀಸ್ ಇಲಾಖೆಗೆ ಮಾಹಿತಿ ಕೊಟ್ಟು ಸಂಪರ್ಕಿಸಿದಾಗ ಪೊಲೀಸರು ನಮ್ಮನ್ನೇ ಸಮಾಧಾನ ಪಡಿಸಿದ್ದರು. ಉದ್ರೇಕಕಾರಿ ಸಂವಿಧಾನ ವಿರೋಧಿ ಬ್ಯಾನರ್‌ಗಳನ್ನು ತೆರವುಗೊಳಿಸಿ, ಬ್ಯಾನರ್ ಹಾಕಿದವರ ವಿರುದ್ಧ ಪ್ರಕರಣ ದಾಖಲಿಸುವಲ್ಲಿ ಪೊಲೀಸರು ವಿಫಲರಾಗಿದ್ದರು’ ಎಂದು ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ತಿಳಿಸಿದ್ದಾರೆ.

‘ಸಂಘಪರಿವಾರ ಮತ್ತೆ ಮತ್ತೆ ‘ಹಿಂದೂರಾಷ್ಟ್ರ’ ಎಂಬ ಸಂವಿಧಾನ ವಿರೋಧಿ ಪದಗಳನ್ನು ಬಳಸುವುದನ್ನು ಪುನರಾವರ್ತನೆ ಮಾಡುತ್ತಿದೆ. ಇದರ ಬಗ್ಗೆ ಪೊಲೀಸ್ ಇಲಾಖೆಯನ್ನು ವಿಚಾರಿಸಿದಾಗ, ನೀವು ಮುಸಲ್ಮಾನರಲ್ಲಿ ಉದ್ರೇಕಗೊಳ್ಳದಿರಲು ಹೇಳಿ ಎಂಬ ಅಸಹಾಯಕತೆಯ ಮಾತನ್ನು ನುಡಿದು ಸಂಘಪರಿವಾರದ ಮೇಲೆ ಮೌನ ವಹಿಸಿ ಮೃದು ಧೋರಣೆ ಅನುಸರಿಸುತ್ತಿದ್ದಾರೆ’ ಎಂದು ಅವರು ಆರೋಪಿಸಿದರು.

ಜಿಲ್ಲೆಯಲ್ಲಿ ಅಶಾಂತಿ ಉಂಟಾದಲ್ಲಿ ಪೋಲಿಸ್ ಇಲಾಖೆ ಮತ್ತು ಜಿಲ್ಲಾಡಳಿತವೆ ನೇರ ಕಾರಣವಾಗಲಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಧಾರ್ಮಿಕತೆಯ ಹೆಸರಿಟ್ಟು ಕೋಮು ದ್ರುವೀಕರಣ ಮಾಡಲು ಯತ್ನಿಸುತ್ತಿರುವ ಸಂಘಪರಿವಾರದವರ ವಿರುದ್ಧ ಸ್ವಯಂ ಪ್ರೇರಿತವಾಗಿ ದೇಶದ್ರೋಹದ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು. ಈ ರೀತಿಯ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಲು ಇಕ್ಬಾಲ್ ಬೆಳ್ಳಾರೆ ಆಗ್ರಹಿಸಿರುವುದಾಗಿ ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಹುಲ್ ಎಸ್. ಎಚ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News