ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ 20 ವರ್ಷ ಪೂರೈಸಿದ ಮಿಥಾಲಿ

Update: 2019-10-09 18:34 GMT

ವಡೋದರ, ಅ.9: ಭಾರತದ ಮಾಜಿ ನಾಯಕಿ ಮಿಥಾಲಿ ರಾಜ್ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ 20 ವರ್ಷಗಳನ್ನು ಪೂರೈಸಿದ ಮೊದಲ ಮಹಿಳಾ ಕ್ರಿಕೆಟಿಗರೆಂಬ ಹೆಗ್ಗಳಿಕೆಗೆ ಪಾತ್ರರಾದರು.

ಬುಧವಾರ ದಕ್ಷಿಣ ಆಫ್ರಿಕಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಆಡಲು ವಡೋದರದ ರಿಲಯನ್ಸ್ ಸ್ಟೇಡಿಯಂಗೆ ಹೆಜ್ಜೆ ಇಡುವ ಮೂಲಕ ಈ ಸಾಧನೆ ಮಾಡಿದರು. ಭಾರತ ತಂಡ ಹರಿಣಪಡೆ ವಿರುದ್ಧ 8 ವಿಕೆಟ್‌ಗಳ ಅಂತರದ ಜಯ ಸಾಧಿಸಿದ್ದು, ಮಿಥಾಲಿ ಔಟಾಗದೆ 11 ರನ್ ಗಳಿಸಿದರು. ಮಿಥಾಲಿ 1999ರ ಜೂ.26ರಂದು ಐರ್ಲೆಂಡ್ ವಿರುದ್ಧ ಆಡುವ ಮೂಲಕ ಏಕದಿನ ಕ್ರಿಕೆಟ್‌ಗೆ ಕಾಲಿಟ್ಟಿದ್ದರು. ಇದೀಗ 50 ಓವರ್ ಮಾದರಿ ಕ್ರಿಕೆಟ್‌ನಲ್ಲಿ 20 ವರ್ಷ ಹಾಗೂ 105 ದಿನಗಳನ್ನು ಪೂರೈಸಿದ್ದಾರೆ. ಮಾರ್ಚ್ ಬಳಿಕ ಮಿಥಾಲಿ ಮೊದಲ ಪಂದ್ಯ ಆಡಿದರು. ಎರಡು ದಶಕಗಳ ಕಾಲ ಏಕದಿನ ಕ್ರಿಕೆಟ್ ಆಡಿದ ವಿಶ್ವದ ಏಕೈಕ ಆಟಗಾರ್ತಿ ಮಿಥಾಲಿ. ಬಲಗೈ ಆಟಗಾರ್ತಿ ಮಿಥಾಲಿ ಮಹಿಳಾ ಕ್ರಿಕೆಟ್‌ನಲ್ಲಿ ಗರಿಷ್ಠ ಸಂಖ್ಯೆಯ ಏಕದಿನ ಪಂದ್ಯವನ್ನು ಆಡಿ ದಾಖಲೆ ನಿರ್ಮಿಸಿದ್ದಾರೆ. ಈ ತನಕ ಅವರು 204 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಇಂಗ್ಲೆಂಡ್‌ನ ಚಾರ್ಲೊಟ್ ಎಡ್ವರ್ಡ್ಸ್(191), ಭಾರತದ ಜುಲನ್ ಗೋಸ್ವಾಮಿ(178), ಆಸ್ಟ್ರೇಲಿಯದ ಅಲೆಕ್ಸ್ ಬ್ಲಾಕ್‌ವೆಲ್(144)ಗರಿಷ್ಠ ಪಂದ್ಯಗಳನ್ನು ಆಡಿದ ಆಟಗಾರ್ತಿಯರ ಪಟ್ಟಿಯಲ್ಲಿದ್ದಾರೆ.

  36ರ ಹರೆಯದ ಆಟಗಾರ್ತಿ ಮಿಥಾಲಿ 10 ಟೆಸ್ಟ್ ಹಾಗೂ 89 ಟಿ-20 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಕಳೆದ ತಿಂಗಳು ಟಿ-20 ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ. ಒಟ್ಟಾರೆ ಭಾರತೀಯ ಬ್ಯಾಟ್ಸ್‌ಮನ್ ಸಚಿನ್ ತೆಂಡುಲ್ಕರ್ ದೀರ್ಘ ಸಮಯ ಏಕದಿನ ಕ್ರಿಕೆಟ್(22 ವರ್ಷ, 91 ದಿನಗಳು)ಆಡಿರುವ ಸಾಧನೆ ಮಾಡಿದ್ದಾರೆ.

ಸಚಿನ್ ಬಳಿಕ ಶ್ರೀಲಂಕಾದ ಸನತ್ ಜಯಸೂರ್ಯ(21 ವರ್ಷ, 184 ದಿನಗಳು), ಪಾಕಿಸ್ತಾನದ ಜಾವೆದ್ ಮಿಯಾಂದಾದ್(20 ವರ್ಷ, 272 ದಿನಗಳು) ಅವರಿದ್ದಾರೆ. ಮಿಥಾಲಿ 4ನೇ ಸ್ಥಾನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News