ಶೇ. 23.7ರಷ್ಟು ಕುಸಿದ ಪ್ಯಾಸೆಂಜರ್ ವಾಹನ ಮಾರಾಟ ಪ್ರಮಾಣ

Update: 2019-10-11 09:50 GMT

ಹೊಸದಿಲ್ಲಿ : ಭಾರತದಲ್ಲಿ ಆಟೋಮೊಬೈಲ್ ಕ್ಷೇತ್ರದ ಬಿಕ್ಕಟ್ಟು ಇನ್ನೂ ಮುಂದುವರಿದಿದ್ದು ಸೆಪ್ಟೆಂಬರ್ ತಿಂಗಳಲ್ಲಿ ಪ್ಯಾಸೆಂಜರ್ ವಾಹನಗಳ ಮಾರಾಟ ಶೇ. 23.7ರಷ್ಟು ಕುಸಿದಿದೆ. ಈ ತಿಂಗಳು ಒಟ್ಟು ಮಾರಾಟವಾದ ಪ್ಯಾಸೆಂಜರ್ ವಾಹನಗಳ ಸಂಖ್ಯೆ 2,23,317 ಆಗಿದ್ದು ಕಳೆದ 11 ತಿಂಗಳುಗಳಲ್ಲಿ ಮಾರಾಟ ಪ್ರಮಾಣ ಸತತ ಇಳಿಕೆ ಕಂಡಿದೆ. ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಮಾರಾಟವಾದ ಪ್ಯಾಸೆಂಜರ್ ವಾಹನಗಳ  ಸಂಖ್ಯೆ 2,92,660 ಆಗಿದೆ.

ಪ್ಯಾಸೆಂಜರ್ ಕಾರುಗಳ ಮಾರಾಟ ಸೆಪ್ಟೆಂಬರ್ ತಿಂಗಳಲ್ಲಿ 1,31,281 ಆಗಿದ್ದು ಹಿಂದಿನ ವರ್ಷಕ್ಕೆ ಹೋಲಿಸಿದಾಗ ಶೇ 33.4ರಷ್ಟು ಕಡಿಮೆಯಾಗಿದೆ ಎಂದು ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ ಅಂಕಿ ಅಂಶಗಳಿಂದ ತಿಳಿದು ಬರುತ್ತದೆ.

ಸೆಪ್ಟೆಂಬರ್ ತಿಂಗಳಲ್ಲಿ ಎಲ್ಲಾ ವಿಭಾಗಗಳ ವಾಹನ ಮಾರಾಟ ಪ್ರಮಾಣ ಶೇ. 22.4ರಷ್ಟು ಇಳಿಕೆಯಾಗಿದ್ದು ಒಟ್ಟು ಮಾರಾಟವಾದ ವಾಹನಗಳ ಸಂಖ್ಯೆ 20,04,932 ಆಗಿದೆ. ಆರ್ಥಿಕ ಹಿಂಜರಿತ, ಕೆಲ ರಾಜ್ಯಗಳಲ್ಲಿನ ಪ್ರವಾಹ ಪರಿಸ್ಥಿತಿ ಹಾಗೂ ಹಣಕಾಸು ಸೌಲಭ್ಯ ಅಲಭ್ಯತೆ ಮಾರಾಟ ಪ್ರಮಾಣದಲ್ಲಿ ಇಳಿಕೆಗೆ ಕಾರಣವಾಗಿದೆ ಎಂದು ಸಂಸ್ಥೆ ಹೇಳಿದೆ.

ಅದೇ ಸಮಯ ಯುಟಿಲಿಟಿ ವಾಹನಗಳ ಮಾರಾಟ ಪ್ರಮಾಣ ಕಳೆದ ವರ್ಷಕ್ಕೆ ಹೋಲಿಸಿದಾಗ ಶೇ 5.5ರಷ್ಟು ಏರಿಕೆಯಾಗಿದ್ದು  ಒಟ್ಟು ಮಾರಾಟವಾದ ವಾಹನಗಳ ಸಂಖ್ಯೆ 8,1,625 ಆಗಿದೆ. ಮಧ್ಯಮ ಮತ್ತು ಘನ ವಾಣಿಜ್ಯ ವಾಹನಗಳ ಮಾರಾಟ ಕಳೆದ ವರ್ಷಕ್ಕೆ ಹೋಲಿಸಿದಾಗ ಶೇ. 62.1ರಷ್ಟು ಕುಸಿತ ಕಂಡಿದೆ.  ಸೆಪ್ಟೆಂಬರ್ ತಿಂಗಳಲ್ಲಿ ಮಾರಾಟವಾದ  ವಾಹನಗಳ ಸಂಖೆ 14,855 ಆಗಿದೆ. ವಾಣಿಜ್ಯ ವಾಹನಗಳ ಮಾರಾಟದಲ್ಲಿ ಒಟ್ಟು ಇಳಿಕೆಯ ಪ್ರಮಾಣ ಶೇ. 39ರಷ್ಟಾಗಿದೆ.

ಮೋಟಾರ್ ಸೈಕಲ್ ಗಳ  ಮಾರಾಟ ಶೇ. 23.2ರಷ್ಟು ಕುಸಿತ ಕಂಡು 10,43,624 ತಲುಪಿದ್ದರೆ ಸ್ಕೂಟರುಗಳ ಮಾರಾಟ ಶೇ. 16.6ರಷ್ಟು ಕುಸಿದಿದೆ. ಸೆಪ್ಟೆಂಬರ್ ನಲ್ಲಿ ಒಟ್ಟು ಮಾರಾಟವಾದ ಸ್ಕೂಟರ್ ಗಳ ಸಂಖ್ಯೆ 5,55,829 ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News