×
Ad

ಮಂಗಳೂರು: ಭಾರೀ ತ್ಯಾಜ್ಯ ಉತ್ಪಾದಕರಿಗೆ ಈ ಮಾಸಾಂತ್ಯದ ಗಡುವು

Update: 2019-10-11 16:18 IST

ಮಂಗಳೂರು, ಅ.11: ಮಹಾನಗರ ಪಾಲಿಕೆಗೆ ತಲೆನೋವಾಗಿ ಪರಿಣಿಸಿರುವ ತ್ಯಾಜ್ಯ ವಿಲೇಗೆ ಹೊಸ ತಂತ್ರವೊಂದಕ್ಕೆ ಮುಂದಾಗಿದ್ದು, ಅಕ್ಟೋಬರ್ ಅಂತ್ಯದೊಳಗೆ ಭಾರೀ ತ್ಯಾಜ್ಯ ಉತ್ಪಾದಕರು ಸ್ವಯಂ ಆಗಿ ಹಸಿ ತ್ಯಾಜ್ಯ ಸಂಸ್ಕರಣಾ ವ್ಯವಸ್ಥೆಯನ್ನು ಮಾಡಿಕೊಳ್ಳುವಂತೆ ಗಡುವು ವಿಧಿಸಿದೆ.

ಈ ಗಡುವಿನ ಪ್ರಕಾರ, ಪಾಲಿಕೆ ವ್ಯಾಪ್ತಿಗೊಳಪಡುವ ಹೊಟೇಲ್‌ಗಳು, ಬಾರ್ ಎಂಡ್ ರೆಸ್ಟೋರೆಂಟ್‌ಗಳು, ಕಲ್ಯಾಣ ಮಂಟಪಗಳು, ಕ್ಯಾಟರಿಂಗ್, ವ್ಯಾಪಾರಿಗಳು, ಕೋಳಿ ಮರಾಟಗಾರರು, ಅಪಾರ್ಟ್‌ಮೆಂಟ್ ಅಸೋಸಿಯೇಶನ್‌ಗಳು, ಸಣ್ಣ ಕೈಗಾರಿಕೆಗಳು, ವಿದ್ಯಾರ್ಥಿ ನಿಲಯಗಳು, ಶಿಕ್ಷಣ ಸಂಸ್ಥೆಗಳು ತಮ್ಮ ಹಸಿ ತ್ಯಾಜ್ಯವನ್ನು ಖುದ್ದಾಗಿ ಸಂಸ್ಕರಣೆ ಮಾಡಬೇಕಾಗಿದೆ. ಈ ಬಗ್ಗೆ ಈಗಾಗಲೇ ಸಂಬಂಧಪಟ್ಟ ಈ ಎಲ್ಲಾ ಸಂಸ್ಥೆಗಳ ಸಂಘಗಳ ಸಭೆಯನ್ನು ಕರೆದು ಪೌರ ಘನತ್ಯಾಜ್ಯ ನಿಯಮಗಳ ಅನುಷ್ಠಾನದ ಕುರಿತು ವಿವರ ನೀಡಲಾಗಿದೆ. ಮಾತ್ರವಲ್ಲದೆ ತ್ಯಾಜ್ಯ ಸಂಸ್ಕರಣೆ ತಂತ್ರಜ್ಞಾನ ಹೊಂದಿರುವ ಸಂಸ್ಥೆಗಳ ಮೂಲಕ ಪ್ರಾತ್ಯಕ್ಷಿಕೆಯನ್ನು ನೀಡಲಾಗಿದೆ ಎಂದು ಮನಪಾ ಆಯುಕ್ತ ಶಾನಾಡಿ ಅಜಿತ್ ಕುಮಾರ್ ತಿಳಿಸಿದರು.

ಪಾಲಿಕೆ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಮುಂದಿನ ತಿಂಗಳಿನಿಂದ ಈ ಭಾರೀ ತ್ಯಾಜ್ಯ ಉತ್ಪಾದಕರಿಂದ ಕೇವಲ ಒಣ ತ್ಯಾಜ್ಯವನ್ನು ಮಾತ್ರ ಪಾಲಿಕೆ ವತಿಯಿಂದ ನೇಮಕ ಮಾಡಲಾಗಿರುವ ಅಧಿಕೃತ ಮರು ಬಳಕೆದಾರರಿಂದ ಸಂಗ್ರಹಿಸಲಾಗುವುದು. ಈ ಬಗ್ಗೆ ಪಾಲಿಕೆಯ ಜಾಲತಾಣದಲ್ಲಿ ತಿಳಿಸಲಾಗುವುದು ಎಂದು ಆಯುಕ್ತರು ತಿಳಿಸಿದರು.

ಉದ್ದಿಮೆ ಪರವಾನಿಗೆ ಇಲ್ಲದೆ ವ್ಯಾಪಾರ ನಡೆಸಿದರೆ ಕ್ರಮ
 

ಪಾಲಿಕೆ ವ್ಯಾಪ್ತಿಯಲ್ಲಿ ಉದ್ದಿಮೆ ನಡೆಸುತ್ತಿರುವ ಎಲ್ಲಾ ಉದ್ದಿಮೆದಾರರು ಪ್ರತಿ ಆರ್ಥಿಕ ವರ್ಷಾಂತ್ಯದೊಳಗೆ ತಮ್ಮ ಪರವಾನಿಗೆಯನ್ನು ನವೀಕರಿಸಬೇಕಾಗುತ್ತದೆ. ಇತ್ತೀಚೆಗೆ ಪಾಲಿಕೆ ವತಿಯಿಂದ ಅದಾಲತ್ ಮೂಲಕ ಈಗಾಗಲೇ ನವೀಕರಣಕ್ಕೆ ಅರ್ಜಿ ಸಲ್ಲಿಸಿದ 300ಕ್ಕೂ ಅಧಿಕ ಮಂದಿಗೆ ಪರವಾನಿಗೆ ನೀಡುವ ಕ್ರಮ ವಹಿಸಲಾಗಿದೆ. ಇನ್ನೂ ಪರವಾನಿಗೆಯನ್ನು ಪಡೆದುಕೊಳ್ಳದವರಿಗೆ ಆರೋಗ್ಯ ಅಧಿಕಾರಿಗಳು ಸಂಬಂಧಪಟ್ಟ ಘಟಕಗಳಿಗೆ ತೆರಳಿ ವಿತರಿಸುವಂತೆ ಸೂಚಿಸಲಾಗಿದೆ. ಈವರೆಗೂ ಪರವಾನಿಗೆ ಮಾಡದೆ ಉದ್ದಿಮೆ ನಡೆಸುತ್ತಿರುವವರು ಈ ತಿಂಗಳ ಅಂತ್ಯದೊಳಗೆ ಅರ್ಜಿ ಸಲ್ಲಿಸಿದರೆ ಆದ್ಯತೆ ಮೇರೆಗೆ ಪರವಾನಿಗೆ ಒದಗಿಸಲು ಕ್ರಮ ವಹಿಸಲಾಗುವುದು. ಈ ತಿಂಗಳಲ್ಲಿ ಮತ್ತೊಂದು ಅದಾಲತ್ ಕೂಡಾ ನಡೆಸಲು ಚಿಂತಿಸಲಾಗಿದೆ. ಇಷ್ಟಾದ ಬಳಿಕವೂ ಪರವಾನಿಗೆ ಇಲ್ಲದೆ ಉದ್ದಿಮೆ ನಡೆಸುತ್ತಿರುವವರ ವಿರುದ್ಧ ಕ್ರಮ ವಹಿಸಲು ಚಿಂತಿಸಾಗಿದೆ ಎಂದು ಆಯುಕ್ತರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News