ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ಸೇರ್ಪಡೆ ಕುರಿತ ಗೊಂದಲಕ್ಕೆ ತೆರೆ

Update: 2019-10-11 13:13 GMT

ಉಡುಪಿ, ಅ.11: ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಕುರಿತ ಗೊಂದಲ ಹಾಗೂ ಚರ್ಚೆಗಳಿಗೆ ಇಂದು ತೆರೆ ಬಿದ್ದಿದೆ. ಕೇರಳ ರಾಜ್ಯದ ಮಂಜೇಶ್ವರ ವಿಧಾನಸಭಾ ಉಪ ಚುನಾವಣೆಯ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಪ್ರಮೋದ್ ಮಧ್ವರಾಜ್ ಅವರಿಗೆ ಕೆಪಿಸಿಸಿ ಹಾಗೂ ಎಐಸಿಸಿಯಿಂದ ಕರೆ ಬಂದಿದೆ. 

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಮೋದ್ ಮಧ್ವರಾಜ್, ನಾಳೆಯಿಂದ ಮಂಜೇಶ್ವರ ಉಪಚುನಾವಣೆಯಲ್ಲಿ ಯುಡಿಎಫ್ ಅಭ್ಯರ್ಥಿ ಪರ ಪ್ರಚಾರ ಕಾರ್ಯದಲ್ಲಿ ಭಾಗವಹಿಸುವಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥನ್ ಫೋನ್ ಕರೆ ಮಾಡಿ ಸೂಚಿಸಿದ್ದಾರೆ. ಅದೇ ರೀತಿ ಉಪ್ಪಳದಲ್ಲಿ ಕಾಂಗ್ರೆಸ್ ಮುಖಂಡ ಕೆ.ಸಿ.ವೇಣುಗೋಪಾಲ್ ಭಾಗವಹಿಸುವ ಕಾರ್ಯಕರ್ತರ ಸಭೆಗೂ ಆಹ್ವಾನ ಬಂದಿದೆ ಎಂದು ಹೇಳಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ನಾನು ಜೆಡಿಎಸ್‌ನಿಂದ ಬಿಪಾರ್ಮ್ ಪಡೆದುಕೊಂಡ ಹಿನ್ನೆಲೆಯಲ್ಲಿ ಜೆಡಿಎಸ್‌ನ ತಾಂತ್ರಿಕ ಸದಸ್ಯನಾಗಿದ್ದೆ. ಈಗಾಗಲೇ ಜೆಡಿಎಸ್‌ನ ತಾಂತ್ರಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆಯೂ ಕೊಡಲಿಲ್ಲ ಮತ್ತು ಕಾಂಗ್ರೆಸ್ ನನ್ನನ್ನು ಉಚ್ಛಾಟನೆ ಕೂಡ ಮಾಡಿರಲಿಲ್ಲ ಎಂದರು. ತಾಂತ್ರಿಕ ಸಮಸ್ಯೆ ಬಿಟ್ಟರೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ನಾನು ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದೇನೆ. ಅದನ್ನು ಅಧಿಕೃತವಾಗಿ ಘೋಷಣೆ ಮಾಡುವ ಕೆಲಸವನ್ನು ಪಕ್ಷ ಮಾಡಬೇಕಾಗಿದೆ. ಇದೀಗ ಪಕ್ಷದ ವರಿಷ್ಠರು ನನ್ನನ್ನು ಮಂಜೇಶ್ವರ ಪ್ರಚಾರ ಕಾರ್ಯಕ್ಕೆ ಕರೆದಿರುವುದರಿಂದ ಆ ಎಲ್ಲ ತಾಂತ್ರಿಕ ಸಮಸ್ಯೆಗಳು ಪರಿಹಾರ ಆಗಿವೆ. ಇನ್ನು ಅಧಿಕೃತವಾಗಿ ಪರಿಹಾರ ಮಾಡಬಹುದು ಎಂದು ಅವರು ತಿಳಿಸಿದರು.

ಇತ್ತೀಚೆಗೆ ದಿನೇಶ್ ಗುಂಡೂರಾವ್ ಅವರನ್ನು ಭೇಟಿ ಮಾಡಿ ಪಕ್ಷದಲ್ಲಿ ಸಕ್ರಿಯವಾಗಿ ಭಾಗವಹಿಸುವ ಅವಕಾಶಕ್ಕಾಗಿ ಕೋರಿ ಪತ್ರ ನೀಡಿದ್ದೇನೆ. ಇದನ್ನು ಎರಡು ಮೂರು ದಿನಗಳಲ್ಲಿ ಬಗೆಹರಿಸುವುದಾಗಿ ಅವರು ಹೇಳಿದ್ದಾರೆ. ಪಕ್ಷಕ್ಕೆ ಸೇರ್ಪಡೆ ಮಾಡಿ ಎಂದು ನಾನು ಪತ್ರ ಬರೆದಿರುವುದಲ್ಲ. ನಾನು ಪಕ್ಷದಲ್ಲಿರುವುದರಿಂದ ಆ ಪ್ರಮೇಯವೇ ಬರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

'ಐಟಿ ದಾಳಿ ರಾಜಕೀಯ ಪ್ರೇರಿತ'

ಬಿಜೆಪಿಯವರು ಉಪ ಚುನಾವಣೆಯ ಸಂದರ್ಭದಲ್ಲಿ ರಾಜ್ಯದ ಕಾಂಗ್ರೆಸ್ ನಾಯಕರನ್ನು ಗುರಿಯಾಗಿರಿಸಿಕೊಂಡು ಐಟಿ ದಾಳಿ ಮಾಡುತ್ತಿದ್ದಾರೆ. ಈ ಮೂಲಕ ವಿರೋಧ ಪಕ್ಷವನ್ನು ಸಂಪೂರ್ಣ ಮುಗಿಸಲು ಬಿಜೆಪಿ ಮುಂದಾಗಿದೆ. ಇದು ಪ್ರಜಾಪ್ರಭುತ್ವದಲ್ಲಿ ಒಳ್ಳೆಯ ಲಕ್ಷಣ ಅಲ್ಲ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಟೀಕಿಸಿದರು. ಇಡೀ ದೇಶದಲ್ಲಿ ಬಿಜೆಪಿಯ ಅನೇಕ ಮುಖ್ಯಮಂತ್ರಿಗಳು, ಸಚಿವರುಗಳು ಹಾಗೂ ನಾಯಕರಿದ್ದಾರೆ. ನಮ್ಮ ಮಂತ್ರಿಗಳು ಲಂಚ ತಗೊಳೋದಿಲ್ಲ, ಚುನಾವಣೆಗೆ ಕಪ್ಪುಹಣ ಬಳಕೆ ಮಾಡುವುದಿಲ್ಲ ಎಂಬುದಾಗಿ ಬಿಜೆಪಿ ಘೋಷಣೆ ಮಾಡಲಿ. ಅದೇ ರೀತಿ ವಿಧಾನಸೌಧದೊಳಗೆ ಮಾಧ್ಯಮಗಳಿಗೆ ನಿಷೇಧ ಹೇರಲಾಗಿದೆ. ಇದೆಲ್ಲವೂ ಪ್ರಜಾಪ್ರಭುತ್ವ ವ್ಯವಸ್ಥೆ ಬಿಜೆಪಿ ಹಾಕುತ್ತಿರುವ ಕೊಡಲಿಯೇಟು ಎಂದು ಅವರು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News