ಪುಂಜಾಲಕಟ್ಟೆ: ಟೆಂಪೋ ಢಿಕ್ಕಿ - ದ್ವಿಚಕ್ರ ವಾಹನ ಸವಾರ ಮೃತ್ಯು

Update: 2019-10-11 13:05 GMT

ಬಂಟ್ವಾಳ, ಅ.11: ಟೆಂಪೋ ಹಾಗೂ ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿ ದ್ವಿಚಕ್ರ ವಾಹನ ಸವಾರ ಮೃತಪಟ್ಟು, ಸಹ ಸವಾರೆ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾದ ಘಟನೆ ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯ ಮಾಡಮೆ ಎಂಬಲ್ಲಿ ಶುಕ್ರವಾರ ನಡೆದಿದೆ.

ಸೂರಿಕುಮೇರು ನಿವಾಸಿ ಇಬ್ರಾಹಿಂ (47) ಮೃತಪಟ್ಟ ದ್ವಿಚಕ್ರ ವಾಹನ ಸವಾರ.

ಬಂಟ್ವಾಳ ತಾಲೂಕಿನ ಕುಕ್ಕಿಪಾಡಿ ಗ್ರಾಮದ ಮಾಡಮೆ ಎಂಬಲ್ಲಿ ಮಧ್ಯಾಹ್ನ ಸುಮಾರು 2.30ರ ವೇಳೆ ಅಪಘಾತ ನಡೆದಿದೆ.

ಇಬ್ರಾಹಿಂ ಅವರು ಮಗಳ ಜೊತೆ ಕಾರ್ಕಳದ ಬೆಳುವಾಯಿ ಸಂಬಂಧಿಕರ ಮನೆಗೆ ತೆರಳಿ ವಾಪಸು ಬರುವ ವೇಳೆ ಮಾಡಮೆ ಎಂಬಲ್ಲಿ ಬಂಟ್ವಾಳದ ಕಡೆಯಿಂದ ಬರುತ್ತಿದ್ದ ಟೆಂಪೋ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಇಬ್ರಾಹಿಂ ಹಾಗೂ ಹಿಂಬದಿಯಲ್ಲಿದ್ದ ಮಗಳು ಗಂಭೀರ ಸ್ವರೂಪದ ಗಾಯಗೊಂಡಿದ್ದರು.

ಗಂಭೀರ ಗಾಯಗೊಂಡ ಇವರಿಬ್ಬರನ್ನು ಮೂಡಬಿದಿರೆಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಇಬ್ರಾಹಿಂ ಅವರು ದಾರಿ ಮಧ್ಯೆ ಅಸುನೀಗಿದ್ದಾರೆ ಎಂದು ಪೋಲೀಸರು ತಿಳಿಸಿದ್ದಾರೆ.

ಹಿಂಬದಿ ಸವಾರೆ ಇಬ್ರಾಹಿಂ ಅವರ ಮಗಳು ಮೂಡಬಿದಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಪುಂಜಾಲಕಟ್ಟೆ ಪೊಲೀಸ್ ಠಾಣಾ ಎಸ್ಸೈ ಸೌಮ್ಯ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News