ವಿವಿ ಮಹಿಳಾ ಸ್ಕ್ವಾಶ್ ರ್ಯಾಕೆಟ್ ಚಾಂಪಿಯನ್‌ಷಿಪ್
ಉಡುಪಿ, ಅ.11: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಆಶ್ರಯದಲ್ಲಿ 2019-20ನೇ ಸಾಲಿನ ಅಖಿಲ ಭಾರತ ಅಂತರ ವಿವಿ ಮಹಿಳಾ ಸ್ಕ್ವಾಶ್ ರ್ಯಾಕೆಟ್ ಚಾಂಪಿಯನ್‌ಷಿಪ್ ಅ.16ರಿಂದ 18ರವರೆಗೆ ಮಣಿಪಾಲದ ಮೆರೆನಾ ಒಳಾಂಗಣ ಕ್ರೀಡಾ ಸಂಕೀರ್ಣದಲ್ಲಿ ನಡೆಯಲಿದೆ ಎಂದು ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್. ಬಲ್ಲಾಳ್ ತಿಳಿಸಿದ್ದಾರೆ.
ಮಣಿಪಾಲದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ಮಣಿಪಾಲದಲ್ಲಿ ಅಖಿಲ ಭಾರತ ಅಂತರ ವಿವಿ ಕ್ರೀಡಾಸ್ಪರ್ಧೆಯೊಂದು ನಡೆಯುತ್ತಿರುವುದು ಇದೇ ಮೊದಲು ಎಂದವರು ತಿಳಿಸಿದರು. ಹೊಸದಿಲ್ಲಿಯ ಭಾರತೀಯ ವಿವಿಗಳ ಸಂಸ್ಥೆ (ಎಐಯು) ಈ ಸ್ಪರ್ಧೆಯನ್ನು ನಡೆಸುವ ಜವಾಬ್ದಾರಿಯನ್ನು ಮಾಹೆಗೆ ನೀಡಿದೆ ಎಂದೂ ಡಾ.ಬಲ್ಲಾಳ್ ತಿಳಿಸಿದರು.
ಅಖಿಲ ಭಾರತ ಮಟ್ಟದಿಂದ ಒಟ್ಟು 30ವಿವಿಗಳು ಭಾಗವಹಿಸುವುದನ್ನು ಈಗಾಗಲೇ ಖಚಿತ ಪಡಿಸಿವೆ. ಒಟ್ಟು 200 ಮಂದಿ ಆಟಗಾರರು, 30 ತಂಡಗಳ ಮ್ಯಾನೇಜರ್ ಮತ್ತು ಕೋಚ್‌ಗಳು ಈ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಲಿದ್ದಾರೆ. ಟೂರ್ನಿಗಾಗಿ ಮೆರೆನಾ ಒಳಾಂಗಣ ಕ್ರೀಡಾಂಗಣದಲ್ಲಿ ಒಟ್ಟು ನಾಲ್ಕು ಸ್ವಾಶ್ ಕೋರ್ಟ್‌ಗಳನ್ನು ಸಜ್ಜುಗೊಳಿಸಲಾಗುತ್ತಿದೆ ಎಂದು ಅವರು ವಿವರಿಸಿದರು.
ಕಳೆದ ವರ್ಷ ದಿಲ್ಲಿ ವಿವಿಯಲ್ಲಿ ನಡೆದ ಈ ಟೂರ್ನಿಯನ್ನು ಜಯಿಸಿದ ಮದರಾಸು ವಿವಿ, ಹಾಲಿ ರಾಷ್ಟ್ರೀಯ ಚಾಂಪಿಯನ್ ತಂಡವೆನಿಸಿಕೊಂಡಿದೆ. ಮಾಹೆ ರನ್ನರ್ ಅಪ್ ತಂಡವಾಗಿದ್ದರೆ, ದಿಲ್ಲಿ ವಿವಿ ಮೂರನೇ ಹಾಗೂ ರಾಯ್‌ಪುರದ ಪಂಡಿತ್ ರವಿಶಂಕರ್ ಶುಕ್ಲಾ ವಿವಿ ನಾಲ್ಕನೇ ಸ್ಥಾನಿಯಾಗಿದೆ. ಈ ಬಾರಿ ಮೇಲಿನ ನಾಲ್ಕೂ ತಂಡಗಳು ನೇರವಾಗಿ ಕ್ವಾರ್ಟರ್ ಫೈನಲ್‌ನಲ್ಲಿ ಆಡುವ ಅರ್ಹತೆ ಪಡೆದಿವೆ ಎಂದರು.
ಈ ಬಾರಿ ಟೂರ್ನಿಯನ್ನು ಜಯಿಸುವ ಗುರಿಯನ್ನು ಹೊಂದಿರುವ ಮಾಹೆ ವಿವಿ ಆರು ಮಂದಿ ಆಟಗಾರರ ತಂಡವನ್ನು ಕಣಕ್ಕಿಳಿಸಲಿದೆ. ಇವರಲ್ಲಿ ತಲಾ ಇಬ್ಬರು ಕೆಎಂಸಿ ಮಣಿಪಾಲ ಹಾಗೂ ಎಂಐಟಿ ಮಣಿಪಾಲದ ಆಟಗಾರರಾದರೆ, ಇನ್ನಿಬ್ಬರು ಮಂಗಳೂರು ಕೆಎಂಸಿಯ ಆಟಗಾರರು ಎಂದು ಡಾ.ಬಲ್ಲಾಳ್ ತಿಳಿಸಿದರು.
ಚಾಂಪಿಯನ್‌ಷಿಪ್‌ನ್ನು ಅ.16ರ ಬುಧವಾರ ಬೆಳಗ್ಗೆ 10:00ಗಂಟೆಗೆ ಮೆರೆನಾ ಒಳಾಂಗಣ ಕ್ರೀಡಾಂಗಣದಲ್ಲಿ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಉದ್ಘಾಟಿಸಲಿದ್ದಾರೆ. ಭಾರತದ ಅಂತಾರಾಷ್ಟ್ರೀಯ ಸ್ವಾಶ್ ಆಟಗಾರ ಹಾಗೂ ಭಾರತದ ಮೊದಲ ಏಷ್ಯನ್ ಜೂನಿಯರ್ ಸ್ಕ್ವಾಶ್ ರ್ಯಾಕೆಟ್ ಚಾಂಪಿಯನ್ ರವಿ ದೀಕ್ಷಿತ್ ಮುಖ್ಯ ಅತಿಥಿಯಾಗಿದ್ದು, ಡಾ.ಎಚ್.ಎಸ್.ಬಲ್ಲಾಳ್ ಅಧ್ಯಕ್ಷತೆ ವಹಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾಹೆ ಪ್ರೊ ವೈಸ್ ಚಾನ್ಸಲರ್ ಡಾ.ಪೂರ್ಣಿಮಾ ಬಾಳಿಗಾ, ಮಾಹೆ ಕ್ರೀಡಾ ಕಾರ್ಯದರ್ಶಿ ಡಾ.ವಿನೋದ್ ನಾಯಕ್, ಜಂಟಿ ಕಾರ್ಯದರ್ಶಿ ಶೋಭಾ ಎಂ.ಇ., ಫೆಡ್ಡಿ ಡೇವಿಡ್ ಉಪಸ್ಥಿತರಿದ್ದರು.