ಸುಳ್ಯ: ಬಸ್ – ಕಾರು ನಡುವೆ ಅಪಘಾತ; ಮೂವರು ಮೃತ್ಯು

Update: 2019-10-11 17:11 GMT
ಮಜೀದ್, ಸಾದಿಕ್

ಸುಳ್ಯ: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಮಾವಿನಕಟ್ಟೆ ಎಂಬಲ್ಲಿ ಶುಕ್ರವಾರ ಸಂಜೆ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಮತ್ತು ಇನ್ನೋವ ಕಾರಿನ ಮಧ್ಯೆ ಉಂಟಾದ ಭೀಕರ ಅಪಘಾತದಲ್ಲಿ ಮೂರು ಮಂದಿ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ಕಾರಿನಲ್ಲಿದ್ದ ಪುತ್ತೂರು ಕಬಕದ ಮಹಮ್ಮದ್ ಸಾದಿಕ್(31), ಕೆದಿಲ ಕಂಪ ನಿವಾಸಿ ಮಜೀದ್(32) ಮತ್ತು ಸುನೈನ(16) ಮೃತಪಟ್ಟವರು. ಕಾರಿನಲ್ಲಿದ್ದ ಸಲ್ವಿನ್ ಫಾರಿಶ್(10), ಮಹಮ್ಮದ್ ಝಕ್ವಾನ್(14) ಮತ್ತು ಅಬೂಬಕ್ಕರ್(40) ಗಾಯಗೊಂಡವರು.

ಕಾಸರಗೋಡಿನಿಂದ ಸುಳ್ಯಕ್ಕೆ ಬರುತ್ತಿದ್ದ ಕೇರಳ ರಸ್ತೆ ಸಾರಿಗೆ ಬಸ್ ಮತ್ತು ಸುಳ್ಯದಿಂದ ಪುತ್ತೂರು ಕಡೆಗೆ ಹೋಗುತ್ತಿದ್ದ ಇನ್ನೋವಾ ಕಾರಿನ ಮಧ್ಯೆ ಶುಕ್ರವಾರ ಸಂಜೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಕಾರು ಸಂಪೂರ್ಣ ನಜ್ಜುಗಜ್ಜಾಗಿದ್ದು ಗಂಭೀರ ಗಾಯಗೊಂಡ ಸಾದಿಕ್ ಮತ್ತು ಮಜೀದ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗಾಯಗೊಂಡವರಿಗೆ ಸುಳ್ಯ ಕೆವಿಜಿ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಯಿತು. ಗಂಭೀರ ಗಾಯಗೊಂಡ ಸುನೈನಾಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ಯಲಾದರೂ ಬಾಲಕಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಸುಳ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸುಳ್ಯ ವೃತ್ತ ನಿರೀಕ್ಷಕ ಸತೀಶ್‍ಕುಮಾರ್, ಎಸ್‍ಐ ಎಂ.ಆರ್.ಹರೀಶ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ. 

ಇಬ್ಬರ ಮದುವೆ ನಿಶ್ಚಿತವಾಗಿತ್ತು:
ಸಂಬಂಧಿಕರಾದ ಸಾಧಿಕ್ ಮತ್ತು ಮಜೀದ್ ಅವರ ಇಬ್ಬರ ಮದುವೆ ನಿಶ್ಚಿತವಾಗಿತ್ತು. ಮದುವೆಗೆ ಸಂಬಂಧಿಕರಿಗೆ ಆಮಂತ್ರಣ ನೀಡಲೆಂದು ಮಡಿಕೇರಿ, ಸುಳ್ಯಕ್ಕೆ ಹೋಗಿ ಹಿಂತಿರುಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.

ವಾರದಲ್ಲಿ ಒಂದೇ ಜಾಗದಲ್ಲಿ ಎರಡನೇ ಅಪಘಾತ:
ಅಡ್ಕಾರ್ ಮಾವಿನಕಟ್ಟೆಯಲ್ಲಿ ವಾರದಲ್ಲಿ ಉಂಟಾದ ಎರಡನೇ ಭೀಕರ ಅಪಘಾತ ಇದಾಗಿದೆ. ಇದೇ ಸ್ಥಳದಲ್ಲಿ ಕಳೆದ ವಾರ ಕಾರು ಮತ್ತು ಲಾರಿ ನಡುವೆ ಉಂಟಾದ ಅಪಘಾತದಲ್ಲಿ ಕೊಡಗು ನಾಪೊಕ್ಲು ಕೊಟ್ಟಮುಡಿಯ ನಾಲ್ಕು ಮಂದಿ ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News