ಮಂಗಳೂರು: ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ; ಆರೋಪಿಗೆ ಏಳು ವರ್ಷ ಜೈಲು
ಮಂಗಳೂರು, ಅ.11: ಮದುವೆಯಾಗುವುದಾಗಿ ನಂಬಿಸಿ ಯುವತಿಯೊಬ್ಬಳನ್ನು ಅತ್ಯಾಚಾರ ಮಾಡಿ ವಂಚನೆ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ ಏಳು ವರ್ಷ ಸಜೆ ವಿಧಿಸಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಶಕ್ತಿನಗರ ಕುಂಟಲ್ಪಾಡಿ ಜಿ.ಗಣೇಶ್‌ಕುಮಾರ್ (34) ಪ್ರಕರಣದ ಆರೋಪಿ.
ವಿಚಾರಣೆ ನಡೆಸಿದ ನ್ಯಾಯಾಲಯ ಅಪರಾಧಿಗೆ ಐಪಿಸಿ 376(ಅತ್ಯಾಚಾರ)ರಡಿ ಏಳು ವರ್ಷ ಸಜೆ ಮತ್ತು ಐದು ಸಾವಿರ ರೂ. ದಂಡ, ಐಪಿಸಿ 417(ವಂಚನೆ)ಆರು ತಿಂಗಳು ಸಜೆ, ಐಪಿಸಿ 506(ಬೆದರಿಕೆ)ರಡಿ ಆರು ತಿಂಗಳು ಸಜೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ(ಕಾಯ್ದೆ)ಗೆ ಆರು ತಿಂಗಳು ಸಜೆ ಮತ್ತು 2,500 ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ದಂಡ ಪಾವತಿಸಲು ತಪ್ಪಿದಲ್ಲಿ ಒಂದು ತಿಂಗಳು ಸಾದಾ ಶಿಕ್ಷೆ ಅನುಭವಿಸಬೇಕಾಗಿದೆ. ಸಂತ್ರಸ್ತ ಯುವತಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಪರಿಹಾರ ಪಡೆಯಲು ಅರ್ಹರೆಂದು ತೀರ್ಪಿನಲ್ಲಿ ತಿಳಿಸಲಾಗಿದೆ.
ಆರೋಪಿ ಗಣೇಶ್ ಮಂಗಳೂರು ನಗರದಲ್ಲಿ ಕಾಂಟ್ರಾಕ್ಟ್‌ದಾರನಾಗಿ ಕೆಲಸ ಮಾಡುತ್ತಿದ್ದು, ಮನೆಕೆಲಸ ಮಾಡುತ್ತಿದ್ದ ಹಾಸನ ಮೂಲದ ಯುವತಿಯ ಜತೆ ಪರಿಚಯವಾಗುತ್ತದೆ. ಈ ಪರಿಚಯ ಪ್ರೇಮಕ್ಕೆ ತಿರುಗಿ 2010ರಿಂದ 2013ರವರೆಗೆ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಯುವಕ ಮದುವೆಯಾಗುವುದಾಗಿ ನಂಬಿಸಿ ನಾನಾ ಲಾಡ್ಜ್‌ಗೆ ಕರೆದೊಯ್ದು ದೈಹಿಕ ಸಂಪರ್ಕ ಬೆಳೆಸುತ್ತಾನೆ. ಲಾಡ್ಜ್‌ಗೆ ಕರೆದೊಯ್ಯುವಾಗ ಯುವತಿಗೆ ಕೃತಕ ಮಾಂಗಲ್ಯಸರ, ಕಾಲುಂಗುರ ಕೂಡ ಹಾಕಿಸುತ್ತಿದ್ದ. ಇಬ್ಬರ ಮಧ್ಯೆ ಜಾತಿ ಪ್ರಸ್ತಾಪ ಬಂದಾಗ ‘ಲೋಕದಲ್ಲಿ ಗಂಡು-ಹೆಣ್ಣು ಎರಡೇ ಜಾತಿ’ ಎಂದು ಬಣ್ಣದ ಮಾತುಗಳಿಂದ ಯುವತಿಯನ್ನು ನಂಬಿಸಿ ಅತ್ಯಾಚಾರ ಮಾಡುತ್ತಿದ್ದ. 2013 ಅ.12ರಂದು ಯುವತಿಯನ್ನು ಕಾರಿನಲ್ಲಿ ಕದ್ರಿಹಿಲ್ ಸಮೀಪಕ್ಕೆ ಕರೆದೊಯ್ದು ಅತ್ಯಾಚಾರ ಮಾಡಿದ್ದಾನೆ ಎಂದು ಆರೋಪಿಸಲಾಗಿತ್ತು.
ಸಂದೇಹಕ್ಕೆ ಕಾರಣವಾದ ಸಂದೇಶ: ಕದ್ರಿ ಹಿಲ್‌ನಲ್ಲಿ ಇಬ್ಬರೂ ಕುಳಿತುಕೊಂಡಿದ್ದಾಗ ಯುವಕನ ಮೊಬೈಲ್‌ನಲ್ಲಿ ಬೇರೆ ಯುವತಿಯ ಮೆಸೇಜ್ ಸಂತ್ರಸ್ತ ಯುವತಿ ನೋಡುತ್ತಾಳೆ. ಆಕೆಗೆ ಗಣೇಶ್ ಬೇರೆ ಯುವತಿ ಜತೆ ಮದುವೆಗೆ ಪ್ರಯತ್ನಿಸುತ್ತಿದ್ದಾನೆಂದು ಅರಿವಿಗೆ ಬಂದಿದ್ದು, ಈ ಕಾರಣದಿಂದ ಮದುವೆಯಾಗಲು ಒತ್ತಾಯಿಸುತ್ತಾಳೆ. ಈ ಸಂದರ್ಭ ಯುವಕ ಜಾತಿ ನಿಂದನೆ ಮಾಡುತ್ತಾನೆ. ಇದರಿಂದ ಬೇಸತ್ತ ಯುವತಿ ತನಗೆ ಗಣೇಶ್ ವಂಚಿಸಿ ಅತ್ಯಾಚಾರ ಮಾಡಿದ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಗೆ ದೂರು ನೀಡುತ್ತಾಳೆ.
ಸಂಧಾನಕ್ಕೆ ಯತ್ನ: ಪೊಲೀಸ್ ದೂರಿಗೆ ಬೆದರಿದ ಗಣೇಶ್ ಕೂಡಲೇ ರಾಜಿ ಸಂಧಾನಕ್ಕೆ ಮುಂದಾಗಿ ಮದುವೆಯಾಗುವ ಭರವಸೆ ನೀಡುತ್ತಾನೆ. ಇದಕ್ಕಾಗಿ ಸಿದ್ಧತೆ ಕೂಡ ಮಾಡಲಾಗಿದ್ದು, ಮದುವೆ ದಿನ ಮಾತ್ರ ನಾಪತ್ತೆಯಾಗುತ್ತಾನೆ. ಈ ಹಿನ್ನೆಲೆಯಲ್ಲಿ 2013ರ ಅಕ್ಟೋಬರ್ 19ರಂದು ಯುವತಿ ಮಂಗಳೂರು ನಗರದ ಮಹಿಳಾ ಠಾಣೆಯಲ್ಲಿ ಅತ್ಯಾಚಾರ, ಮೋಸ, ದೌರ್ಜನ್ಯ ದೂರು ನೀಡುತ್ತಾಳೆ.
ನಗರದ ಕೇಂದ್ರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ತಿಲಕ್‌ಚಂದ್ರ ಪ್ರಾರಂಭಿಕ ತನಿಖೆ ನಡೆಸಿ, ಸದಾನಂದ ವರ್ಣೇಕರ್ ದೋಷಾರೋಪಣ ಪಟ್ಟಿ ಸಲ್ಲಿಸಿದ್ದಾರೆ. ಪ್ರಕರಣವನ್ನು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ವಿಶೇಷ ನ್ಯಾಯಾಲಯ)ದ ನ್ಯಾಯಾಧೀಶೆ ಬಿ.ಆರ್. ಪಲ್ಲವಿ ವಿಚಾರಣೆ ನಡೆಸಿ ಶಿಕ್ಷೆ ಪ್ರಕಟಿಸಿದ್ದಾರೆ.
ಆರೋಪಿ ಕೋರ್ಟ್‌ನಲ್ಲಿ ತಾನು ಲೈಂಗಿಕತೆಗೆ ಸಾಮರ್ಥ್ಯ ಹೊಂದಿಲ್ಲ ಎಂದು ವಾದ ಮಾಡಿದ್ದರೂ ಅದಕ್ಕೆ ಪೂರಕ ದಾಖಲೆ ನೀಡುವಲ್ಲಿ ವಿಫಲವಾಗಿದ್ದಾನೆ. ಗಣೇಶ್ ತನ್ನ ಸ್ನೇಹಿತರಲ್ಲೂ ‘ಈಕೆ ನನ್ನ ಮದುವೆಯಾಗುವವಳು’ ಎಂದು ಪರಿಚಯಿಸಿದ್ದಾನೆ. ಈ ಪ್ರಕರಣದಲ್ಲಿ ಲಾಡ್ಜ್‌ನ ಮ್ಯಾನೇಜರ್ ಸೇರಿದಂತೆ ಒಟ್ಟು 28 ಸಾಕ್ಷಿಯನ್ನಾಗಿ ಪರಿಗಣಿಸಲಾಗಿದ್ದು, 18 ಜನ ಸಾಕ್ಷಿ ನುಡಿದಿದ್ದಾರೆ.
ಸರಕಾರದ ಪರವಾಗಿ ಬಿ.ಶೇಖರ್ ಶೆಟ್ಟಿ ವಾದಿಸಿದ್ದರು.