×
Ad

ಮಂಗಳೂರು: ಮಾಲ್‌ ನಲ್ಲಿ ವಿದ್ಯಾರ್ಥಿನಿ ಜೊತೆಗಿದ್ದ ಯುವಕನಿಗೆ ಹಲ್ಲೆ ಪ್ರಕರಣ; ಐವರು ಆರೋಪಿಗಳಿಗೆ ಶಿಕ್ಷೆ

Update: 2019-10-11 19:55 IST

ಮಂಗಳೂರು, ಅ.11: ಉಡುಪಿಯ ಕಾಲೇಜು ವಿದ್ಯಾರ್ಥಿನಿ ಜತೆ ನಗರದ ಮಾಲ್‌ಗೆ ತಿರುಗಾಡಲು ಬಂದ ಯುವಕನಿಗೆ ಹಲ್ಲೆ ನಡೆಸಿದ ಪ್ರಕರಣದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಐವರು ಆರೋಪಿಗಳಿಗೆ ಶಿಕ್ಷೆ ವಿಧಿಸಿ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ಕಾವೂರು ಜ್ಯೋತಿನಗರ ನಿವಾಸಿ ಚೇತನ್ (23), ಶೃಂಗೇರಿ ನೆಲ್ಲೂರು ನಿವಾಸಿ ರಕ್ಷಿತ್ ಕುಮಾರ್ (21), ಕಂದುಕ ನಿವಾಸಿ ಅಶ್ವಿನ್‌ರಾಜ್ (21), ಕಾರ್ಕಳ ಇನ್ನಾ ನಿವಾಸಿ ಸುಶಾಂತ್ ಶೆಟ್ಟಿ (23), ಕಾರ್‌ಸ್ಟ್ರೀಟ್ ನಿವಾಸಿ ಶರತ್ ಕುಮಾರ್ (28) ಶಿಕ್ಷೆಗೊಳಗಾದ ಆರೋಪಿಗಳು.

ಆರೋಪಿಗಳಿಗೆ ಐಪಿಸಿ 143 (ಅಕ್ರಮ ಕೂಟ)ರಡಿ 3ಸಾವಿರ ರೂ., ಐಪಿಸಿ 147(ಅಕ್ರಮ ಕೂಟದ ಹಲ್ಲೆ) 3ಸಾವಿರ ರೂ., ಐಪಿಸಿ 148ರಡಿ (ಮಾರಣಾಂತಿಕ ಆಯಧ ಬಳಕೆ) 3ಸಾವಿರ ರೂ., ಐಪಿಸಿ 342(ಅಕ್ರಮ ಬಂಧನ) 1ಸಾವಿರ ರೂ., ಐಪಿಸಿ 323ರಡಿ 1ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಪ್ರತಿಯೊಬ್ಬ ಅಪರಾಧಿಯು 21 ಸಾವಿರ ರೂ. ದಂಡ ಕಟ್ಟಬೇಕು, ತಪ್ಪಿದಲ್ಲಿ 8 ತಿಂಗಳ ಸಜೆ ಅನುಭವಿಸಬೇಕಾಗಿದೆ. ದಂಡದ ಮೊತ್ತದಲ್ಲಿ 50 ಸಾವಿರ ರೂ. ಯುವಕನಿಗೆ ಪರಿಹಾರ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಕರಣದ ವಿವರ: ಉಡುಪಿಯ ಯುವಕನು ಮಣಿಪಾಲದಲ್ಲಿ ವ್ಯಾಸಂಗ ಮಾಡುತ್ತಿದ್ದ ಮಹಾರಾಷ್ಟ್ರ ಮೂಲದ ಯುವತಿಯೊಬ್ಬಳನ್ನು ನಗರದ ಪಾಂಡೇಶ್ವರದ ಮಾಲ್‌ಗೆ ಕರೆದುಕೊಂಡು ಹೋಗಿದ್ದ. ಸಿನೆಮಾ ನೋಡಿದ ಬಳಿಕ ಮರಳಿ ಹೋಗಲು ರಿಕ್ಷಾ ಸ್ಟ್ಯಾಂಡ್‌ಗೆ ಹೋದಾಗ 5ಮಂದಿ ಯುವಕರ ತಂಡ ತಡೆದು ಯುವಕನನ್ನು ದೇವಸ್ಥಾನ ಸಮೀಪ ಕರೆದೊಯ್ಯುತ್ತಾರೆ. ಬಳಿಕ ಅಕ್ರಮ ಬಂಧನವಿರಿಸಿ ದೊಣ್ಣೆ, ರಾಡ್‌ನಿಂದ ಹಲ್ಲೆ ಮಾಡುತ್ತಾರೆ. ಇದರಿಂದ ಗಾಬರಿಗೊಂದ ಯುವತಿ ಪಾಂಡೇಶ್ವರ ಠಾಣೆಗೆ ದೂರು ನೀಡುತ್ತಾಳೆ. ಘಟನೆಯ ಬಳಿಕ ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಾನೆ. ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತದೆ.

ಪ್ರಕರಣದ ಬಗ್ಗೆ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಸಯಿದುನ್ನೀಸಾ ವಿಚಾರಣೆ ನಡೆಸಿ, ಆರೋಪ ಸಾಬೀತುಪಡಿಸಿ ತೀರ್ಪು ನೀಡುತ್ತಾರೆ. ಪ್ರಕರಣದಲ್ಲಿ 11 ಮಂದಿ ಸಾಕ್ಷಿದಾರರು, 17 ದಾಖಲೆ ಪರಿಗಣಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಬಳಿಕ ಅನಂತಪದ್ಮನಾಭ ವಿಚಾರಣೆ ನಡೆಸಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಕೋರ್ಟ್ ವಿಚಾರಣೆ ಹಂತದಲ್ಲಿ ಯುವತಿ ಮಾತ್ರ ಸಾಕ್ಷಿ ಹೇಳಲು ಹಿಂದೇಟು ಹಾಕಿದ್ದಾಳೆ.

ಶಿಕ್ಷೆಗೊಳಗಾದ 2ನೇ ಪ್ರಕರಣ
ಮಂಗಳೂರು ನಗರದಲ್ಲಿ ಅನೈತಿಕ ಪೊಲೀಸ್‌ಗಿರಿ ಸಂಬಂಧಿಸಿ ಶಿಕ್ಷೆಯಾದ ಪ್ರಕರಣದಲ್ಲಿ ಇದು 2ನೇ ಘಟನೆಯಾಗಿದೆ. 2011ರಲ್ಲಿ ಯುವತಿಯೊಬ್ಬಳು ತನ್ನ ಪರಿಚಯದ ಯುವಕನೊಂದಿಗೆ ಕೊಣಾಜೆ ಕಾಲೇಜೊಂದಕ್ಕೆ ಹೋಗುತ್ತಿರುವಾಗ ಯುವಕರು ಅಡ್ಡಗಟ್ಟಿ ಹಲ್ಲೆ ಮಾಡಿದ್ದರು. ಈ ಪ್ರಕರಣದಲ್ಲೂ ಅಪರಾಧಿಗಳಿಗೆ ಶಿಕ್ಷೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News