ಎಲ್ಲ ವರ್ಗದ ಜನರ ವಿಶ್ವಾಸ ಗಳಿಸಿದರೆ ನಿಜವಾದ ನಾಯಕರಾಗಲು ಸಾಧ್ಯ: ಉಡುಪಿ ಜಿಲ್ಲಾಧಿಕಾರಿ ಜಗದೀಶ್
ಉಡುಪಿ, ಅ.11: ಎಲ್ಲ ವರ್ಗದ ಜನರ ವಿಶ್ವಾಸ ಗಳಿಸಿ ಸಮಾಜ ಒಪ್ಪಿ ಕೊಂಡಾಗ ಮಾತ್ರ ನಿಜವಾದ ನಾಯಕರಾಗಲು ಸಾಧ್ಯವೇ ಹೊರತು ಕೇವಲ ಹಣ, ಸೀಮಿತ ಜಾತಿ ಮತ್ತು ಧರ್ಮಗಳಿಂದ ನಿಜವಾದ ನಾಯಕರಾಗಲು ಸಾಧ್ಯವಿಲ್ಲ. ಇಂದು ಎಲ್ಲ ಕ್ಷೇತ್ರಗಳಲ್ಲಿಯೂ ನಾಯಕತ್ವದ ಅಗತ್ಯ ಇರುವುದರಿಂದ ಕ್ಷೇತ್ರದ ಅಭಿವೃದ್ಧಿಗಾಗಿ ಯುವ ಜನತೆ ನಾಯಕತ್ವವನ್ನು ವಹಿಸುವ ಕೆಲಸ ಮಾಡಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.
ನೆಹರೂ ಯುವ ಕೇಂದ್ರ ಸಂಘಟನೆ ಬೆಂಗಳೂರು ಹಾಗೂ ನೆಹರೂ ಯುವ ಕೇಂದ್ರ ಉಡುಪಿಯ ಜಂಟಿ ಸಹಯೋಗದಲ್ಲಿ ಬ್ರಹ್ಮಗಿರಿಯ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಎಸ್‌ಎಚ್‌ಜಿ ತರಬೇತಿ ಸಂಸ್ಥೆಯ ಪ್ರಗತಿ ಸೌಧದಲ್ಲಿ ಆಯೋಜಿಸಲಾದ ರಾಷ್ಟ್ರೀಯ ಸೇವಾ ಕಾರ್ಯಕರ್ತರ 15 ದಿನಗಳ ತರಬೇತಿ ಶಿಬಿರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಜನ, ಸಮಾಜ, ರಾಷ್ಟ್ರದ ಬಗ್ಗೆ ಚಿಂತನೆ ಮಾಡುವವರು ಮಾತ್ರ ಮಹಾನ್ ನಾಯಕರುಗಳಾಗಲು ಸಾಧ್ಯ. ಯುವ ಸಮುದಾಯ ಧನಾತ್ಮಕ ಚಿಂತನೆಯನ್ನು ಮಾಡಬೇಕು. ಮಹಾನ್ ನಾಯಕರೊಂದಿಗೆ ಕೇವಲ ಸೆಲ್ಫಿ ತೆಗೆದರೆ ಸಾಲದು. ಅವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಸಾಮಾಜಿಕ ಜಾಲತಾಣ ಹಾಗೂ ಮೊಬೈಲ್‌ಗಳಿಂದ ದೂರ ಇದ್ದು, ಜ್ಞಾನ ವೃದ್ಧಿಗೆ ಆದ್ಯತೆ ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಶಿಬಿರಾರ್ಥಿಗಳಾಗಿ ಬಂದಿರುವವರು ಯುವ ನಾಯಕರಾಗಿ ಹೊರಹೊಮ್ಮಿ ತಮ್ಮ ಜಿಲ್ಲೆಗಳಿಗೆ ತೆರಳಬೇಕು. ಇಲ್ಲಿ ವಿಧಿಸಿರುವ ತರಬೇತಿ ನಿಯಮಗಳನ್ನು ಪ್ರತಿಯೊಬ್ಬರು ಪಾಲಿಸಬೇಕು. ಭಾವಿ ನಾಯಕರಿಗೆ ಜೀವನದಲ್ಲಿ ಶಿಸ್ತು ಅತಿ ಮುಖ್ಯ. ಅಂತಹ ಶಿಸ್ತು ಸಂಯಮಗಳನ್ನು ಈ ತರಬೇತಿ ಮೂಲಕ ಪಡೆದು ಕೊಳ್ಳಬೇಕು. ಇಲ್ಲಿ ಮಾಡಿರುವ ಅಧ್ಯಯನವನ್ನು ತಮ್ಮ ಕ್ಷೇತ್ರಗಳಲ್ಲಿ ಅನುಷ್ಠಾನಗೊಳಿಸುವ ಕಾರ್ಯ ಮಾಡಬೇಕು ಎಂದರು.
ಉಡುಪಿ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ, ಎಸ್‌ಎಚ್‌ಜಿ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಅಶೋಕ್ ಕೆ., ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ. ಜಿ.ವಿಜಯ್ ಮುಖ್ಯ ಅತಿಥಿಗಳಾಗಿದ್ದರು.
ಉಡುಪಿ ನೆಹರೂ ಯುವ ಕೇಂದ್ರದ ಜಿಲ್ಲಾ ಯುವ ಸಂಯೋಜಕ ವಿಲ್ಫ್ರೆಡ್ ಡಿಸೋಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಲೆಕ್ಕಾಧಿಕಾರಿ ವಿಷ್ಣುಮೂರ್ತಿ ಸ್ವಾಗತಿಸಿದರು. ಶ್ರೇಯಸ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.
ಅ.24ರವರೆಗೆ ನಡೆಯಲಿರುವ ವಸತಿ ಸಹಿತವಾಗಿರುವ ಈ ತರಬೇತಿ ಶಿಬಿರದಲ್ಲಿ ರಾಜ್ಯದ ಮಂಡ್ಯ, ಹಾಸನ, ಕೊಡಗು, ಚಿಕ್ಕಮಗಳೂರು, ಮಂಗಳೂರು, ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳಿಂದ ನಿಯೋಜಿತ ರಾಗಿರುವ ಒಟ್ಟು 108 ಮಂದಿ ಯುವ ಕಾರ್ಯಕರ್ತರು ಭಾಗವಹಿಸಿದ್ದಾರೆ.