ಭ್ರೂಣಹತ್ಯೆಯ ವಿರುದ್ಧ ‘ಆಪರೇಷನ್ ಡಿಕಾಯಿ’: ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಉಡುಪಿ ಡಿಸಿ ಎಚ್ಚರಿಕೆ
ಉಡುಪಿ, ಅ.11: ಹೆಣ್ಣು ಭ್ರೂಣಹತ್ಯೆಗೆ ಸಹಕಾರ ನೀಡುವ ಸ್ಕ್ಯಾನಿಂಗ್ ಸೆಂಟರ್‌ಗಳನ್ನು ಸಾಕ್ಷಿ ಸಮೇತವಾಗಿ ಪತ್ತೆ ಹಚ್ಚುವ ನಿಟ್ಟಿನಲ್ಲಿ ಕೋಲಾರ ಜಿಲ್ಲೆಯಲ್ಲಿ ನಡೆಸಿರುವ ‘ಆಪರೇಷನ್ ಡಿಕಾಯಿ’ ಉಡುಪಿ ಜಿಲ್ಲೆಯಲ್ಲೂ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದ್ದಾರೆ.
ಉಡುಪಿ ಮಕ್ಕಳ ಸಹಾಯವಾಣಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ರೋಟರಿ ಉಡುಪಿಯ ಸಂಯುಕ್ತ ಆಶ್ರಯದಲ್ಲಿ ನಿಟ್ಟೂರಿನ ಸ್ತ್ರೀ ಸೇವಾ ನಿಕೇತನದಲ್ಲಿ ಶುಕ್ರವಾರ ಆಯೋಜಿಸಲಾದ ರಾಷ್ಟೀಯ ಹೆಣ್ಣು ಮಕ್ಕಳ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಭ್ರೂಣಗಳನ್ನು ಸ್ಕ್ಯಾನ್ ಮಾಡುವ ಸೆಂಟರ್‌ಗಳನ್ನು ಪತ್ತೆ ಹಚ್ಚುವುದು ಅಷ್ಟು ಸುಲಭದ ಕೆಲಸ ಅಲ್ಲ. ಆದುದರಿಂದ ಅಧಿಕಾರಿಗಳೇ ರೋಗಿಗಳಂತೆ ಸೆಂಟರ್‌ಗೆ ಹೋಗಿ ಭ್ರೂಣ ಹತ್ಯೆಗೆ ಸಹಕರಿಸುವ ಕೊಲೆಪಾತಕರನ್ನು ಸಾಕ್ಷಿ ಸಮೇತವಾಗಿ ಹಿಡಿಯುವ ಕಾರ್ಯಾಚರಣೆಯೇ ‘ಆಪರೇಷನ್ ಡಿಕಾಯಿ’ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಜನನ ಕಡಿಮೆ ಇರುವ ಪ್ರದೇಶಗಳನ್ನು ಅಂಕಿ ಅಂಶಗಳನ್ನು ಪರಿಶೀಲಿಸುವ ಮೂಲಕ ಗುರುತಿಸಿ ಆ ಭಾಗದಲ್ಲಿ ಈ ಕಾರ್ಯಾಚರಣೆ ನಡೆಸಲಾಗುವುದು. ಹೆಣ್ಣು ಮಕ್ಕಳ ಜನನ ಕಡಿಮೆ ಇರುವಲ್ಲಿ ಭ್ರೂಣ ಹತ್ಯೆ ಮಾಡುವ ಕೊಲೆಪಾತಕರು ಇದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಅಂತಹವರನ್ನು ಪತ್ತೆ ಹಚ್ಚಿ ಜೈಲಿಗೆ ಕಳುಹಿಸುವ ಕೆಲಸ ಮಾಡಲಾಗುವುದು. ಇಂತಹ ಕಾರ್ಯದಲ್ಲಿ ಯಾರಾದರೂ ತೊಡಗಿದ್ದರೆ ಕೂಡಲೇ ಆ ಕೆಲಸವನ್ನು ನಿಲ್ಲಿಸಬೇಕು. ಇನ್ನು ಮುಂದೆ ಅವರ ಆಟ ನಡೆಯುವುದಿಲ್ಲ. ಆ ದಿಕ್ಕಿನಲ್ಲಿ ಜಿಲ್ಲಾಡಳಿತ ಕೆಲಸ ಮಾಡಲಿದೆ ಎಂದು ಅವರು ಎಚ್ಚರಿಕೆ ನೀಡಿದರು.
ಮಹಿಳೆಯರು ಮತ್ತು ಮಕ್ಕಳಿಗೆ ಸರಕಾರದಿಂದ ಸಿಗುವ ಸೌಲಭ್ಯಗಳು ಸರಿಯಾಗಿ ಸಿಗಬೇಕು. ಆಹಾರ ಪೂರೈಕೆ ಮತ್ತು ಸಾರಿಗೆ ವಿಚಾರದಲ್ಲಿ ಕೆಲವೊಂದು ಲಾಬಿಗಳು ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ಸರಿಯಾದ ಸಮಯಕ್ಕೆ ಸರಿಯಾದ ಪ್ರಮಾಣದಲ್ಲಿ ಆಹಾರ ಪೂರೈಕೆ ಮಾಡುವಲ್ಲಿ ಸಮಸ್ಯೆಗಳು ಕಂಡು ಬರುತ್ತಿವೆ. ಅದನ್ನು ನಿವಾರಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹೆಣ್ಣು ಮಕ್ಕಳಲ್ಲಿ ಅಪೌಷ್ಟಿಕತೆ ಪ್ರಮಾಣ ಹೆಚ್ಚಾಗಿ ಕಂಡು ಬರುತ್ತಿದ್ದು, ಜಿಲ್ಲೆಯಲ್ಲಿ 90 ಮಕ್ಕಳು ತೀವ್ರ ತೆರನಾದ ಅಪೌಷ್ಟಿಕತೆ ಮತ್ತು 2100 ಮಕ್ಕಳು ಸಾಧಾರಣ ರೂಪದ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಹಾಸ್ಟೆಲ್, ಶಾಲೆ, ಅಂಗನವಾಡಿಗಳ ಸುಧಾರಣೆ ಮೊದಲ ಆದ್ಯತೆಯಾಗಿದ್ದು, ಇಲ್ಲಿರುವ ಲೋಪ ದೋಷಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು ಎಂದು ಅವರು ಹೇಳಿದರು.
ಹಿರಿಯ ಸಿವಿಲ್ ನ್ಯಾಯಧೀಶೆ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಾವೇರಿ ಲೇಲೆ ಮಾತನಾಡಿ, ಹೆಣ್ಣು ಮತ್ತು ಗಂಡು ಇಬ್ಬರೂ ಇದ್ದಾಗ ಸಮಾಜದಲ್ಲಿ ಸಮಾನತೆ ಬರುತ್ತದೆ. ಹೆಣ್ಣು ಭ್ರೂಣ ಹತ್ಯೆ ಹೆಚ್ಚಾದಾಗ ಈ ಪ್ರಮಾಣದಲ್ಲಿ ಏರು ಪೇರಾಗುತ್ತದೆ. ಅನಾದಿ ಕಾಲದಿಂದಲೂ ಹೆಣ್ಣಿನ ಶೋಷಣೆ ನಡೆಯುತ್ತಲೇ ಬಂದಿದೆ. ಅದೇ ವೇಳೆ ಸಮಾಜಕ್ಕೆ ಮಾದರಿಯಾಗಿ ಬದುಕಿದಂತಹ ಹೆಣ್ಣು ಮಕ್ಕಳ ನಿದರ್ಶನವೂ ನಮ್ಮ ಮುಂದಿದೆ. ಹೆಣ್ಣು ಮಕ್ಕಳಿಗೆ ಶಿಕ್ಷಣವೇ ಶಕ್ತಿ. ಇದರಿಂದ ಆರ್ಥಿಕ ಸಬಲತೆಯನ್ನು ಪಡೆದು ಜೀವನದಲ್ಲಿ ಮಹತ್ತರವಾದ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರೋನಾಲ್ಡ್ ಫುರ್ಟಾಡೊ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಗ್ರೇಸಿ ಗೊನ್ಸಾಲಿಸ್ ಉಪಸ್ಥಿತರಿ ದ್ದರು. ಮಣಿಪಾಲ ಮಾಹೆಯ ವಿದ್ಯಾರ್ಥಿ ಆಪ್ತ ಸಮಾಲೋಚಕಿ ಶಿಲ್ಪಾ ಜೋಷಿ ವಿಶೇಷ ಉಪನ್ಯಾಸ ನೀಡಿದರು. ಮಕ್ಕಳ ಸಹಾಯವಾಣಿ. ನಿರ್ದೇಶಕ ರಾಮ ಚಂದ್ರ ಉಪಾಧ್ಯಾಯ ಅಧ್ಯಕ್ಷತೆ ವಹಿಸಿದ್ದರು.
ರೋಟರಿ ಉಡುಪಿ ಅಧ್ಯಕ್ಷ ಜನಾರ್ದನ ಭಟ್ ಸ್ವಾಗತಿಸಿದರು. ಮಕ್ಕಳ ಸಹಾಯವಾಣಿಯ ಜ್ಯೋತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸ್ತೂರಿ ವಂದಿಸಿದರು. ನೇತ್ರ ಮತ್ತು ತ್ರಿವೇಣಿ ಕಾರ್ಯಕ್ರಮ ನಿರೂಪಿಸಿದರು.
ಬಾಲ್ಯ ವಿವಾಹ ಈಗಲೂ ಎಲ್ಲ ಕಡೆ ಜೀವಂತವಾಗಿದೆ. ಜಿಲ್ಲೆಯಲ್ಲಿ ಬಾಲ್ಯ ವಿವಾಹ ಕಂಡುಬಂದರೆ ಅದರ ವಿರುದ್ಧ ಮುಲಾಜಿಲ್ಲದೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಬಾಲ್ಯವಿವಾಹಕ್ಕೆ ಸಂಬಂಧಿಸಿ ಪೋಷಕರು ಮಾತ್ರ ವಲ್ಲ ಪುರೋಹಿತರು, ಊಟ ಮಾಡಿದವರು ಹಾಗೂ ಭಾಗವಹಿಸಿದ ಎಲ್ಲರಿಗೂ ಜೈಲು ಶಿಕ್ಷೆ ವಿಧಿಸುವ ಅವಕಾಶ ಕಾನೂನಿನಲ್ಲಿ ಇದೆ. ಆದುದರಿಂದ ಇಂತಹ ಕಾರ್ಯದಲ್ಲಿ ಯಾರು ಕೂಡ ಪಾಲ್ಗೊಳ್ಳಬಾರದು ಎಂದು ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದರು.