ಟಿಆರ್‌ಎಫ್‌ನಿಂದ ಪ್ರತಿಭಾನ್ವಿತರಿಗೆ ಸನ್ಮಾನ, ಹೊಲಿಗೆಯಂತ್ರ ವಿತರಣೆ
ಮಂಗಳೂರು, ಅ.11: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ನಗರದ ಕಂಕನಾಡಿಯ ಟಿಆರ್‌ಎಫ್ ಕಾನ್ಫರೆನ್ಸ್ ಹಾಲ್‌ನಲ್ಲಿ ಶುಕ್ರವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ನಾಲ್ವರು ಪ್ರತಿಭಾನ್ವಿತರಿಗೆ ಸನ್ಮಾನ, ಮೂವರು ಮಹಿಳೆಯರಿಗೆ ಉಚಿತ ಹೊಲಿಗೆಯಂತ್ರ, ವೀಲ್‌ಚೇರ್, ಹಣ್ಣು-ಹಂಪಲು ಮಾರಾಟದ ಸಾಮಗ್ರಿಗಳನ್ನು ವಿತರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಡ್ಯಾರ್ ಕಣ್ಣೂರು ಮಸೀದಿಯ ಖತೀಬ್ ಅನ್ಸರ್ ಪೈಝಿ ಬುರ್ಹಾನಿ, ಟಿಆರ್‌ಎಫ್ ಸಂಘಟನೆಯು ಎಲ್ಲ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದೆ. ಇದು ಕೇವಲ ಪ್ರತಿಭಾನ್ವೇಷಣೆ ಮಾಡದೇ ಅಸಹಾಯಕ ಮಹಿಳೆಯರು, ವಿಧವೆಯರಿಗೆ ಸಹಾಯಹಸ್ತ ನೀಡುತ್ತಾ ಬರುತ್ತಿದೆ. ಅಲ್ಲದೆ, ನಿರಾಶ್ರಿತರಿಗೆ ಮನೆ ನಿರ್ಮಿಸಿ ಹಸ್ತಾಂತರಿಸಲಾಗುತ್ತಿದೆ. ಇದು ಮಾದರಿಯ ಕಾರ್ಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸಂಸ್ಥಾಪಕ, ಚೇರ್‌ಮನ್ ಅಬ್ದುರ್ರವೂಫ್ ಪುತ್ತಿಗೆ, ಉನ್ನತ ಸ್ಥಾನಕ್ಕೇರಿದ ವ್ಯಕ್ತಿ ಮೊದಲು ತಾನಿದ್ದ ಅಸ್ತಿತ್ವವನ್ನು ನೆನಪಿಸಿಕೊಳ್ಳಬೇಕು. ಸಮುದಾಯದ ಅಭಿವೃದ್ಧಿಗೆ ಕೈಲಾದಷ್ಟು ಸಹಾಯ, ಸಹಕಾರ ನೀಡಬೇಕು. ಸಮುದಾಯದಲ್ಲಿ ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದವರಿದ್ದಾರೆ. ಅಂಥವರ ಬಗ್ಗೆ ಕನಿಕರ ಪಡಬೇಕು. ಕೈಬಿಚ್ಚಿ ಸಹಾಯಹಸ್ತ ನೀಡಬೇಕು ಎಂದು ಹೇಳಿದರು.
ಬಡತನ ಮತ್ತು ಹಸಿವು ತುಂಬ ಅಪಾಯಕಾರಿಯಾದವು. ಅವುಗಳನ್ನು ನಿವಾರಿಸಲು ಕಡುಬಡವರು ಬದುಕಿನ ಜತೆ ನಿರಂತರ ಯುದ್ಧಕ್ಕೆ ನಿಂತಿದ್ದಾರೆ. ಸಮುದಾಯದಲ್ಲಿ ಆರ್ಥಿಕವಾಗಿ ಸದೃಢಗೊಂಡವರು ಇನ್ನುಳಿದವರ ಬಗ್ಗೆಯೂ ಕಣ್ತೆರೆದು ನೋಡಬೇಕು. ಕೆಲವು ಮಂದಿ ಸಬಲರಾದರೆ ಸಮುದಾಯ ಅಭಿವೃದ್ಧಿಯಾಗಲ್ಲ. ಎಲ್ಲರನ್ನೂ ಒಗ್ಗಟ್ಟಾಗಿ ಕರೆದೊಯ್ಯುವ ಮನೋಭಾವನೆ ಬೆಳೆಯಬೇಕು ಎಂದು ತಿಳಿಸಿದರು.
ಟಿಆರ್‌ಎಫ್ ಅಧ್ಯಕ್ಷ ರಿಯಾಜ್ ಕಣ್ಣೂರು ಪ್ರಾಸ್ತಾವಿಕವಾಗಿ ಮಾತನಾಡಿ, ಟಿಆರ್‌ಎಫ್ ಅಂದರೆ ಕೇವಲ ಮಕ್ಕಳಿಗೆ ವಿದ್ಯಾರ್ಥಿ ವೇತನ ದೊರಕಿಸಿ ಕೊಡುವುದಲ್ಲದೆ, ಹಲವು ರಂಗಗಳಲ್ಲಿನ ಪ್ರತಿಭೆಗಳ ಅನ್ವೇಷಣೆ ಮಾಡಲಾಗುತ್ತಿದೆ. ಪ್ರತಿವರ್ಷ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ಸುಮಾರು ಐದು ಕೋಟಿ ರೂ.ಗೂ ಅಧಿಕ ವಿದ್ಯಾರ್ಥಿ ವೇತನವನ್ನು ಮಕ್ಕಳಿಗೆ ತೆಗೆಸಿಕೊಡುವಲ್ಲಿ ಸಂಸ್ಥೆ ಯಶಸ್ಸು ಗಳಿಸಿದೆ. ಪ್ರತಿ ಜಮಾಅತ್ ನಲ್ಲೂ ಸಂಘಟನೆ ಕಾರ್ಯ ನಿರ್ವಹಿಸುತ್ತಿದೆ. ಇದಕ್ಕೆ ಜನರ ಸಹಕಾರ ಅಗತ್ಯವಿದೆ. ಜಿಲ್ಲೆಯ ಜನತೆ ಟಿಆರ್‌ಎಫ್‌ಗೆ ‘ಸನ್ಮಾನಿಸುವ ಸಂಸ್ಥೆ’ ಎಂದೂ ಬಣ್ಣಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಿಎಂ ಪದವಿಯಲ್ಲಿ ನಿಮ್ಹಾನ್ಸ್ ನಲ್ಲಿ ಶ್ರೇಷ್ಠ ವಿದ್ಯಾರ್ಥಿ ಪದಕ ಪಡೆದ ಡಾ.ಸಫ್ವಾನ್ ಅಹ್ಮದ್, ವೈದ್ಯಕೀಯ ಕ್ಷೇತ್ರದಲ್ಲಿನ ಸಾಧನೆ ಸುಲಭವಲ್ಲ. 14 ವರ್ಷಗಳ ನಿರಂತರ ಪರಿಶ್ರಮದಿಂದ ಸಾಧನೆಯ ಶಿಖರ ಏರಲು ಸಾಧ್ಯವಾಯಿತು. ನನ್ನ ಯಶಸ್ಸಿಗೆ ತಾಯಿ-ಪತ್ನಿಯ ಸಹಕಾರ ತುಂಬ ಇದೆ. ಯುವಕರು ತಂದೆ ತಾಯಿಯ ಮಾತುಗಳಿಗೆ ಪ್ರಾಮುಖ್ಯತೆ ನೀಡಬೇಕು ಎಂದರು.
ಟಿಆರ್‌ಎಫ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಕಣ್ಣೂರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಹಿದಾಯ ಫೌಂಡೇಶನ್ ಟ್ರಸ್ಟಿ ಝಿಯಾವುದ್ದೀನ್ ಅಹ್ಮದ್, ಉದ್ಯಮಿಗಳಾದ ಮುಹಮ್ಮದ್ ಅಜೀಮ್, ವಿಲ್ಸನ್ ಜೈಸನ್, ನಂಡೆ ಪೆಂಙಳ್ ಅಧ್ಯಕ್ಷ ನೌಶಾದ್ ಹಾಜಿ ಸೂರಲ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಟಿಆರ್‌ಎಫ್ ಸಲಹೆಗಾರ ಸಲಾಂ ಉಸ್ತಾದ್ ಕಿರಾಅತ್ ಪಠಿಸಿದರು. ಟಿಆರ್‌ಎಫ್ ಅಧ್ಯಕ್ಷ ರಿಯಾಜ್ ಕಣ್ಣೂರು ಸ್ವಾಗತಿಸಿದರು. ಹಕೀಮ್, ಜಸೀಮ್, ಅಬ್ದುಲ್ ಮಜಿದ್ ಹುಸೈನ್ ಸಹಕರಿಸಿದರು. ನಕಾಶ್ ವಂದಿಸಿದರು. ಮುಹಮ್ಮದ್ ಯು.ಬಿ. ಕಾರ್ಯಕ್ರಮ ನಿರೂಪಿಸಿದರು.
ಪ್ರತಿಭಾನ್ವಿತರಿಗೆ ಸನ್ಮಾನ:
ಡಿಎಂ ಪದವಿಯಲ್ಲಿ ನಿಮ್ಹಾನ್ಸ್ ನಲ್ಲಿ ಶ್ರೇಷ್ಠ ವಿದ್ಯಾರ್ಥಿ ಪದಕ ಪಡೆದ ಡಾ.ಸಫ್ವಾನ್ ಅಹ್ಮದ್, ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶೇಖ್ ಆದಮ್, ಪ್ಯಾರಾ ದೇಹದಾರ್ಢ್ಯ ಪಟು ಜಗದೀಶ್ ಪೂಜಾರಿ, ಬ್ಯಾರಿ ಸಮುದಾಯದ ಪ್ರಥಮ ಪೈಲೇಟ್ ಹಾನಿಯಾ ಹನೀಫ್ ಕಾಪು ಅವರ ಪರವಾಗಿ ಹನೀಫ್ ಅವರನ್ನು ಮುಖ್ಯ ಅತಿಥಿಗಳು ಸನ್ಮಾನಿಸಿದರು.