ರೋಗಿ ಪ್ರಜ್ಞಾವಸ್ಥೆಯಲ್ಲಿರುವಾಗಲೇ ಶ್ವಾಸಕೋಶದ ಶಸ್ತ್ರಚಿಕಿತ್ಸೆ ನಡೆಸಿದ ಎ.ಜೆ. ಆಸ್ಪತ್ರೆಯ ವೈದ್ಯರು

Update: 2019-10-11 15:29 GMT

ಮಂಗಳೂರು, ಅ.10: ರೋಗಿ ಪ್ರಜ್ಞಾವಸ್ಥೆಯಲ್ಲಿರುವಾಗಲೇ ಶ್ವಾಸ ಕೋಶದ ಶಸ್ತ್ರಚಿಕಿತ್ಸೆಯನ್ನು ನಗರದ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ. ವೈದ್ಯಕೀಯ ವಿಜ್ಞಾನದಲ್ಲಿ ‘ಅವೇಕ್ ಲಂಗ್ ಸರ್ಜರಿ’ ಎಂದು ಕರೆಯಲ್ಪಡುವ ಈ ಶಸ್ತ್ರಚಿಕಿತ್ಸೆಯು ತೀರಾ ಅಪರೂಪದ ಶಸ್ತ್ರಚಿಕಿತ್ಸೆಯಾಗಿದೆ.

ಬಂಟ್ವಾಳ ತಾಲೂಕಿನ 28 ವರ್ಷದ ಯುವಕನನ್ನು ತೀವ್ರ ಉಸಿರಾಟದ ತೊಂದರೆ ಮತ್ತು ಎರಡೂ ಕಾಲುಗಳ ದುರ್ಬಲತೆ ಸಮಸ್ಯೆಯಿಂದಾಗಿ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶ್ವಾಸಕೋಶ ತಜ್ಞರು ಕೂಲಂಕಶ ತಪಾಸಣೆ ನಡೆಸಿದಾಗ ಶ್ವಾಸಕೋಶದ ದಪ್ಪದ್ರವರೂಪಿ ಪೊರೆಯಿಂದ ಕೂಡಿದ ಲಾಕ್ಯುಲೇಟೆಡ್ ಎಂಪೈಮಾ (ಶ್ವಾಸಕೋಶದ ವೈಫಲ್ಯ) ಹಾಗೂ ನಿಯಂತ್ರಣ ಕಳೆದುಕೊಂಡಿರುವ (ಡಿಮೈಲಿನೇಟಿಂಗ್ ಪಾಲಿ ನ್ಯೂರೋಪತಿ) ಸಮಸ್ಯೆಯಿಂದ ಬಳಲುತ್ತಿರುವುದು ಕಂಡು ಬಂತು.

ಅತಿಕ್ಲಿಷ್ಟಕರವಾದ ಎದೆಯ ಮತ್ತು ಶ್ವಾಸಕೋಶದ ಶಸ್ತ್ರಚಿಕಿತ್ಸೆಗೆ ಸಂಪೂರ್ಣ ಅರಿವಳಿಕೆ ಅಗತ್ಯ. ಆದರೆ ತೀವ್ರತರವಾದ ಸಮಸ್ಯೆಯಿಂದ ಬಳಲುತ್ತಿದ್ದ ಈ ರೋಗಿಗೆ ಸಂಪೂರ್ಣ ಅರಿವಳಿಕೆ ಕೊಟ್ಟು ಶಸ್ತ್ರಚಿಕಿತ್ಸೆ ಅಸಾಧ್ಯವಾಗಿತ್ತು. ಅದರಿಂದ ರೋಗಿಯ ಪ್ರಾಣಕ್ಕೇ ಅಪಾಯದ ಸಾಧ್ಯತೆಯೂ ಇದ್ದುದರಿಂದ ಪ್ರಜ್ಞಾವಸ್ಥೆಯಲ್ಲಿಯೇ ಸ್ಥಳೀಯ ಅರಿವಳಿಕೆಯನ್ನು ನೀಡಿ ಶಸ್ತ್ರಕ್ರಿಯೆ ನಡೆಸಲಾಯಿತು.

ಎ.ಜೆ. ಆಸ್ಪತ್ರೆಯ ಹೃದಯ ಮತ್ತು ರಕ್ತನಾಳಗಳ ನುರಿತ ಉತ್ಸಾಹೀ ಶಸ್ತ್ರಚಿಕಿತ್ಸಕ ಡಾ ಸಂಭ್ರಮ್ ಶೆಟ್ಟಿ, ಹೃದಯ ಶಸ್ತ್ರಚಿಕಿತ್ಸಕ ಡಾ.ಜಯಶಂಕರ್ ಮಾರ್ಲ, ಹೃದಯದ ಅರಿವಳಿಕೆ ತಜ್ಞ ಡಾ.ಗುರುರಾಜ್ ತಂತ್ರಿ, ಡಾ.ಸುಹಾಸ್ ಎಂ.ಕೆ. ಹಾಗೂ ಅನುಭವಿ ವೈದ್ಯ್ಪೆತರ ಸಿಬ್ಬಂದಿಯ ಪ್ರಯತ್ನದಿಂದ ಈ ಸಾಹಸಪೂರ್ಣ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯನ್ನು ಯಶಸ್ವಿ ಯಾಗಿ ಮಾಡಲಾಗಿದೆ. ರೋಗಿಯು ಶೀಘ್ರ ಚೇತರಿಸಿಕೊಂಡು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ತೆರಳಿದ್ದಾರೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಪ್ರಶಾಂತ್ ಮಾರ್ಲ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News