×
Ad

ರಂಗಪಾದೆ ತಿರುವಿನಲ್ಲೇ ಸಿಕ್ಕಿಹಾಕಿಕೊಂಡ ಲಾರಿ: ತಪ್ಪಿದ ಭಾರೀ ಅನಾಹುತ

Update: 2019-10-11 21:31 IST

ಮಂಗಳೂರು, ಅ.11: ನೀರುಮಾರ್ಗದಿಂದ ಬಿ.ಸಿ.ರೋಡಿಗೆ ಹೋಗುವ ರಸ್ತೆಯ ರಂಗಪಾದೆ ತಿರುವಿನಲ್ಲಿ 32 ಟನ್ ಸಿಮೆಂಟ್ ಹೊತ್ತ ಲಾರಿಯೊಂದು ಟರ್ನ್ ಆಗದೆ ಸಿಕ್ಕಿಹಾಕಿಕೊಂಡ ಕಾರಣ ನಾಲ್ಕು ಗಂಟೆಗಳ ಕಾಲ ಈ ರಸ್ತೆಯಲ್ಲಿ ಸಂಚಾರ ವ್ಯತ್ಯಯವಾಗಿದೆ.

ಶುಕ್ರವಾರ ಬೆಳಗ್ಗೆ 8:30ರ ವೇಳೆ 32 ಟನ್ ಸಿಮೆಂಟು ಹೊತ್ತ ಲಾರಿಯೊಂದು ನೀರುಮಾರ್ಗದಿಂದ ಮಲ್ಲೂರು ಕಡೆಗೆ ಚಲಿಸುತ್ತಿತ್ತು. ಈ ಸಂದರ್ಭ ರಂಗಪಾದೆ ತಿರುವಿನಲ್ಲಿ ಲಾರಿ ಟರ್ನ್ ಮಾಡಲಾಗದೆ ಅಡ್ಡವಾಗಿ ನಿಂತಿತು. ಇದರಿಂದ ಸುಮಾರು ನಾಲ್ಕು ಗಂಟೆಗಳ ಕಾಲ ಸಂಚಾರ ವ್ಯತ್ಯಯವಾಯಿತು.

ಬೆಳಗ್ಗಿನ ಸಮಯವಾದ ಕಾರಣ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ಕಚೇರಿಗಳಿಗೆ ತೆರಳುವ ಸಿಬ್ಬಂದಿ, ಕಾರ್ಮಿಕರು, ವ್ಯಾಪಾರಿಗಳು ತೊಂದರೆ ಅನುಭವಿಸಿದರು. ಪರ್ಯಾಯ ವ್ಯವಸ್ಥೆಗಳು ಇಲ್ಲದ ಕಾರಣ ಬಸ್‌ಗಳಿಂದ ಇಳಿದು ಕಿಲೋಮೀಟರ್ ನಡೆದುಕೊಂಡೇ ಸಾಗಿದರು.

ತಪ್ಪಿದ ಅನಾಹುತ: ತಿರುವಿನ ಬಲಭಾಗಕ್ಕೆ 30ಕ್ಕೂ ಅಧಿಕ ಅಡಿ ಆಳ ಕಂದಕವಿದ್ದು ಲಾರಿ ಸ್ವಲ್ಪ ಮುಂದೆ ಹೋಗುತ್ತಿದ್ದರೂ ಭಾರೀ ಅನಾಹುತ ಸಂಭವಿಸುತ್ತಿತ್ತು. ಘಟನಾ ಸ್ಥಳಕ್ಕೆ ಕಂಕನಾಡಿ ನಗರ ಸಂಚಾರ ಪೊಲೀಸರು ತೆರಳಿ ಪರಿಶೀಲನೆ ನಡೆಸಿದರು.

ಸ್ಥಳೀಯರ ಸಹಕಾರದಿಂದ ಲಾರಿಯಲ್ಲಿದ್ದ 150ರಷ್ಟು ಗೋಣಿ ಸಿಮೆಂಟನ್ನು ಮತ್ತೊಂದು ಪಿಕಪ್, ಟಿಪ್ಪರ್‌ಗೆ ಶಿಫ್ಟ್ ಮಾಡಲಾಯಿತು. ಬಳಿಕ ಸುಮಾರು ನಾಲ್ಕು ಗಂಟೆಗಳ ಕಾರ್ಯಾಚರಣೆ ಬಳಿಕ ಲಾರಿಯನ್ನು ತೆರವು ಮಾಡಲಾಯಿತು.

ಈ ರಸ್ತೆಯಲ್ಲಿ ಪ್ರತಿನಿತ್ಯ ಹಲವು ಬಸ್‌ಗಳು ಸಂಚರಿಸುತ್ತಿದ್ದು, ಬೆಳಗ್ಗೆ ಮತ್ತು ಸಂಜೆ ತುಂಬಿ ತುಳುಕುತ್ತಿವೆ. ಇದು ಮಾತ್ರವಲ್ಲದೆ ಖಾಸಗಿ ಶಾಲೆಗಳ ಬಸ್‌ಗಳದ್ದು ಕೂಡ ಇದೇ ಪರಿಸ್ಥಿತಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News