‘ಜಮ್ಮು ಕಾಶ್ಮೀರದಲ್ಲಿ ಸಹಜತೆ ಇದೆ’ ಎಂಬ ವಾದವನ್ನು ಸುಳ್ಳಾಗಿಸಿದ ಸರಕಾರದ ಜಾಹೀರಾತು

Update: 2019-10-11 17:17 GMT

ಶ್ರೀನಗರ,ಅ.11: ಕಾಶ್ಮೀರವು ಶುಕ್ರವಾರ ಅನಿಶ್ಚಿತತೆಯ 68ನೇ ದಿನಕ್ಕೆ ಕಾಲಿರಿಸಿದೆ. ಇನ್ನೂ ಮಾರುಕಟ್ಟೆಗಳು ಮುಚ್ಚಿಯೇ ಇವೆ,ಸಾರ್ವಜನಿಕ ಸಾರಿಗೆ ವಾಹನಗಳೂ ರಸ್ತೆಗಿಳಿದಿಲ್ಲ. ಸದ್ಯೋಭವಿಷ್ಯದಲ್ಲಿ ಕಾಶ್ಮೀರ ಕಣಿವೆಯಲ್ಲಿ ಸಹಜತೆ ಮರಳುತ್ತದೆ ಎನ್ನುವುದಕ್ಕೆ ಹೇಳಿಕೊಳ್ಳುವಂತಹ ಲಕ್ಷಣಗಳೂ ಕಂಡು ಬರುತ್ತಿಲ್ಲ.

ತನ್ಮಧ್ಯೆ ರಾಜ್ಯ ಸರಕಾರವು ಶುಕ್ರವಾರ ಸ್ಥಳೀಯ ದೈನಿಕಗಳ ಮುಖಪುಟದಲ್ಲ್ಲಿ ಜಾಹೀರಾತೊಂದನ್ನು ಪ್ರಕಟಿಸಿ,ತಮ್ಮ ಸಹಜ ಬದುಕುಗಳನ್ನು ಪುನರಾರಂಭಿಸುವಂತೆ ಜನರನ್ನು ಆಗ್ರಹಿಸಿದೆ.

‘ಮುಚ್ಚಿದ ಅಂಗಡಿಗಳು,ಆರಂಭಗೊಳ್ಳದ ಸಾರ್ವಜನಿಕ ಸಾರಿಗೆ ’ಎಂಬ ಒಕ್ಕಣೆಯನ್ನು ಹೊಂದಿರುವ ಜಾಹೀರಾತು ‘ಇದರ ಲಾಭ ಯಾರಿಗೆ ’ಎಂದು ಪ್ರಶ್ನಿಸಿದೆ.

ಕಾಶ್ಮೀರದಲ್ಲಿ ಸಹಜ ಸ್ಥಿತಿ ನಿರ್ಮಾಣಗೊಂಡಿದೆ ಎಂದು ಕೇಂದ್ರ ಮತ್ತು ರಾಜ್ಯ ಸರಕಾರಗಳು ಹೇಳಿಕೊಳ್ಳುತ್ತಿರುವ ಸಂದರ್ಭದಲ್ಲಿಯೇ ‘ಸಹಜತೆಯ ಬಲೂನನ್ನು’ ಠುಸ್ಸೆನಿಸಿರುವ ಈ ಮನವಿ ರೂಪದ ಜಾಹೀರಾತು ಹೊರಬಿದ್ದಿದೆ.

“ನಾವು ಉಗ್ರರಿಗೆ ಬಲಿಯಾಗುತ್ತಿದ್ದೆವೆಯೇ? ಯೋಚಿಸಿ. ನಾವಿಂದು ಕವಲುದಾರಿಯಲ್ಲಿದ್ದೇವೆ. ಅವೇ ಹಳೆಯ ಬೆದರಿಕೆಗಳು ಮತ್ತು ಬಲವಂತಗಳು ನಮ್ಮ ಮೇಲೆ ಪ್ರಭಾವ ಬೀರಲು ನಾವು ಅವಕಾಶ ನೀಡುತ್ತಿದ್ದೇವೆಯೇ?, ಬೆದರಿಕೆ ಮತ್ತು ತಪ್ಪುಮಾಹಿತಿಗಳೇ ಆಳುತ್ತವೆಯೇ ಅಥವಾ ನಮಗೆ ಯಾವುದು ಅತ್ಯುತ್ತಮ ಎನ್ನುವುದರ ಕುರಿತು ನಾವು ಖಚಿತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆಯೇ” ಎಂಬ ಪ್ರಶ್ನೆಗಳನ್ನು ಜಾಹೀರಾತು ಒಳಗೊಂಡಿದೆ.

ಯಾವುದೇ ಗುಂಪು ಬಂದ್‌ಗೆ ಕರೆ ನೀಡಿಲ್ಲವಾದರೂ,ಜನರು ತಮ್ಮ ಸಹಜ ಬದುಕನ್ನು ಪುನರಾರಂಭಿಸದಿರಲು ಸ್ವಯಂ ನಿರ್ಧರಿಸಿದ್ದಾರೆ ಎಂದು ಈ ಜಾಹೀರಾತು ಬಿಂಬಿಸುತ್ತಿರುವಂತಿದೆ.

ವಿಧಿ 370ನ್ನು ರದ್ದುಗೊಳಿಸಿದ್ದ ಆ.5ರಿಂದ ಮುಚ್ಚಲಾಗಿದ್ದ ಶಿಕ್ಷಣ ಸಂಸ್ಥೆಗಳನ್ನು ಮತ್ತೆ ತೆರೆಯಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ,ಆದರೆ ವಿದ್ಯಾರ್ಥಿಗಳು ಮಾತ್ರ ಬರುತ್ತಿಲ್ಲ.

ಕಳೆದೊಂದು ತಿಂಗಳಿನಲ್ಲಿ ನಿರ್ಬಂಧಗಳನ್ನು ಸಾಕಷ್ಟು ಸಡಿಲಿಸಲಾಗಿದೆಯಾದರೂ,ಮೊಬೈಲ್ ಫೋನ್ ಮತ್ತು ಅಂತರ್ಜಾಲ ಸೇವೆಗಳ ಮೇಲಿನ ನಿರ್ಬಂಧ ಮುಂದುವರಿದಿದೆ. ಕಳೆದ ಕೆಲವು ವಾರಗಳಲ್ಲಿ ಶ್ರೀನಗರದಲ್ಲಿ ಖಾಸಗಿ ವಾಹನಗಳ ಸಂಚಾರ ನಿಧಾನವಾಗಿ ಹೆಚ್ಚುತ್ತಿದೆ. ಮಾರುಕಟ್ಟೆಗಳು ಬೆಳಿಗ್ಗೆ ಏಳು ಗಂಟೆಯ ಸುಮಾರಿಗೆ ಎರಡು ಗಂಟೆಗಳ ಕಾಲ ತೆರೆದಿರುತ್ತವೆ.

“ಕೆಲವು ಪೋಸ್ಟರ್‌ಗಳು ಮತ್ತು ಬೆದರಿಕೆಗಳು ನಾವು ನಮ್ಮ ವ್ಯವಹಾರಗಳನ್ನು ಪುನರಾರಂಭಿಸದಂತೆ,ನಮ್ಮ ಕಾಶ್ಮೀರಕ್ಕೆ ಅಭಿವೃದ್ಧಿಯ ಫಲಗಳು ದೊರೆಯದಂತೆ ಮಾಡಲು ನಾವು ಅವಕಾಶ ನೀಡುತ್ತಿದ್ದೇವೆಯೇ” ಎಂದು ಪ್ರಶ್ನಿಸಿರುವ ಜಾಹೀರಾತು,‘ “ಇದು ನಮ್ಮ ಮನೆ. ಅದರ ಹಿತ ಮತ್ತು ಸಮೃದ್ಧಿಯ ಬಗ್ಗೆ ನಾವೇ ಚಿಂತನೆ ನಡೆಸಬೇಕು” ಎಂದು ಹೇಳಿದೆ.

‘ ಹೆದರಿಕೆ ಏಕೆ ’ಎಂದೂ ಅದು ಪ್ರಶ್ನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News