ಗುಂಪು ಹತ್ಯೆ ಖಂಡಿಸಿ ಪ್ರಧಾನಿಗೆ ಪತ್ರ ಬರೆಯಲು ಮುಂದಾದ ಆರು ವಿದ್ಯಾರ್ಥಿಗಳ ಉಚ್ಛಾಟನೆ

Update: 2019-10-11 17:09 GMT

ಮುಂಬೈ, ಅ.11: ದೇಶದಲ್ಲಿ ನಡೆಯುತ್ತಿರುವ ಗುಂಪು ಥಳಿತ ಘಟನೆಯನ್ನು ಖಂಡಿಸಿ ಪ್ರಧಾನಿ ಮೋದಿಗೆ ಪತ್ರ ಬರೆಯಲು ಅನುಮತಿ ನಿರಾಕರಿಸಿರುವ ವಿವಿ ಆಡಳಿತದ ನಿರ್ಧಾರವನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಕೇಂದ್ರ ವಿವಿಯ ಆರು ವಿದ್ಯಾರ್ಥಿಗಳನ್ನು ಉಚ್ಛಾಟಿಸಲಾಗಿದೆ ಎಂದು ವರದಿಯಾಗಿದೆ.

ಮಹಾತ್ಮಾ ಗಾಂಧಿ ಅಂತರಾಷ್ಟ್ರೀಯ ಹಿಂದಿ ವಿವಿಯಲ್ಲಿ ಬುಧವಾರ ಗುಂಪು ಹತ್ಯೆ ಖಂಡಿಸಿ ಪ್ರಧಾನಿಗೆ ಪತ್ರ ಬರೆಯುವ ಕಾರ್ಯಕ್ರಮವಿತ್ತು. ಇದರಲ್ಲಿ ಪಾಲ್ಗೊಳ್ಳಲು ಆರು ಮಂದಿ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ಅನುಮತಿ ನಿರಾಕರಿಸಿತ್ತು. ಚಂದನ್ ಸರೋಜ್, ನೀರಜ್ ಕುಮಾರ್, ರಾಜೇಶ್ ಸಾರಥಿ, ರಜನೀಶ್ ಅಂಬೇಡ್ಕರ್, ಪಂಕಜ್ ವೇಲ ಮತ್ತು ವೈಭವ್ ಪಿಂಪ್ಲಾಕರ್ ಉಚ್ಛಾಟನೆಗೊಂಡಿದ್ದು ಇವರೆಲ್ಲಾ ದಲಿತ ಸಮುದಾಯ ಹಾಗೂ ಇತರ ಹಿಂದುಳಿದ ಸಮುದಾಯದ ವಿದ್ಯಾರ್ಥಿಗಳು ಎಂದು ವರದಿ ತಿಳಿಸಿದೆ. ಉಚ್ಛಾಟನೆಯ ಆದೇಶದಲ್ಲಿ ಈ ವಿದ್ಯಾರ್ಥಿಗಳು ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಮತ್ತು ಆಡಳಿತಾತ್ಮಕ ಪ್ರಕ್ರಿಯೆಗೆ ಅಡ್ಡಿ ಬರುವ ಉದ್ದೇಶದಿಂದ ಸಾಮೂಹಿಕ ಪ್ರತಿಭಟನೆಗೆ ಮುಂದಾಗಿದ್ದರು ಎಂದು ತಿಳಿಸಲಾಗಿದೆ.

ವಿವಿ ಆವರಣದಲ್ಲಿ ಯಾವುದೇ ರೀತಿಯ ಪ್ರತಿಭಟನೆ ನಡೆಸಲು ಆಸ್ಪದವಿಲ್ಲ ಎಂದು ಸೋಮವಾರ ವಿವಿಯ ಆಡಳಿತ ಸೂಚಿಸಿತ್ತು. ಬುಧವಾರ ವಿದ್ಯಾರ್ಥಿಗಳು ಪ್ರಧಾನಿಗೆ ಬರೆದ ಪತ್ರದಲ್ಲಿ - ಮೋದಿ ಆಡಳಿತದಲ್ಲಿ ‘ಕಾಶ್ಮೀರದಲ್ಲಿ ಸದ್ದಡಗಿಸಿರುವುದು, ಅತ್ಯಾಚಾರ ಆರೋಪಿ ಮುಖಂಡರನ್ನು ರಕ್ಷಿಸುವುದು, ಪ್ರಜಾಪ್ರಭುತ್ವದ ಕೊಲೆ’ ಮತ್ತಿತರ ಘಟನೆಗಳನ್ನು ಉಲ್ಲೇಖಿಸಲಾಗಿದೆ. ಎಡಂಥೀಯ ವಿದ್ಯಾರ್ಥಿ ವೇದಿಕೆ ‘ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್’ ಈ ಕಾರ್ಯಕ್ರಮ ಆಯೋಜಿಸಿತ್ತು.

ಗುಂಪು ಹತ್ಯೆಯನ್ನು ಖಂಡಿಸಿ ಪ್ರಧಾನಿಗೆ ಬಹಿರಂಗ ಪತ್ರ ಬರೆದ 49 ಚಿಂತಕರ ವಿರುದ್ಧ ಬಿಹಾರದಲ್ಲಿ ರಾಷ್ಟ್ರದ್ರೋಹ ಪ್ರಕರಣ ದಾಖಲಿಸಿರುವುದನ್ನು ವಿರೋಧಿಸಿ ವಿದ್ಯಾರ್ಥಿ ಸಂಘಟನೆ ‘ಪ್ರಧಾನಿಗೆ ಪತ್ರ ಬರೆಯುವ’ ಪ್ರತಿಭಟನೆ ಆಯೋಜಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News