ಮಂಗಳೂರು: ಶಿವರಾಮ ಕಾರಂತರ ಹುಟ್ಟು ಹಬ್ಬ ಆಚರಣೆ
ಮಂಗಳೂರು, ಅ.11: ಕಲ್ಕೂರ ಪ್ರತಿಷ್ಠಾನದ ಆಶ್ರಯದಲ್ಲಿ ನಗರದ ಡಾನ್‌ಬಾಸ್ಕೋ ಹಾಲ್‌ನಲ್ಲಿ ಡಾ. ಶಿವರಾಮ ಕಾರಂತ ಹುಟ್ಟುಹಬ್ಬ ಕಾರ್ಯಕ್ರಮವು ಗುರುವಾರ ಜರಗಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮನಪಾ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಮಕ್ಕಳ ಸಾಹಿತ್ಯ, ಪ್ರವಾಸ ಕಥನ, ಕಾದಂಬರಿ ಯಕ್ಷಗಾನ, ವಿಜ್ಞಾನ ಹೀಗೆ ವೈವಿಧ್ಯಮಯವಾಗಿ ಬಹಳಷ್ಟು ಕೃತಿಗಳನ್ನು ರಚಿಸಿ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರು ಸಾಹಿತ್ಯ ಲೋಕದ ಅದ್ಭುತ ಪ್ರತಿಭೆಯಾಗಿದ್ದರು. ತನ್ನ ನೇರ ನಡೆ ನುಡಿಯ ಮೂಲಕ ಅಷ್ಟೇ ಅದ್ಭುತವಾದ ಪಾಂಡಿತ್ಯವನ್ನು ಹೊಂದಿದ ಕಾರಂತರನ್ನು ಸ್ಮರಿಸುವುದು ನಿಜಕ್ಕೂ ಔಚಿತ್ಯಪೂರ್ಣ ಎಂದು ಹೇಳಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕ ಶ್ರೀಧರ ಹಂದೆಗೆ ‘ಕಾರಂತ ಪ್ರಶಸ್ತಿ’ ಹಾಗೂ ಇತ್ತೀಚೆಗೆ ಕೆನಡಾದಲ್ಲಿ ಜರುಗಿದ ಕಾಮನ್‌ವೆಲ್ತ್ ಇಂಟರ್‌ನ್ಯಾಷನಲ್ ಬೆಂಚ್- ಪ್ರೆಸ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನ 83 ಕೆಜಿ ಸಬ್ ಜೂನಿಯರ್ ವಿಭಾಗದಲ್ಲಿ 2 ಚಿನ್ನದ ಪದಕವನ್ನು ಗಳಿಸಿರುವ ಮಂಗಳೂರಿನ ರಿತ್ವಿಕ್ ಅಲೆವುರಾಯ ಕೆ.ವಿ. ಅವರಿಗೆ ‘ಕಾರಂತ ಹುಟ್ಟುಹಬ್ಬ ಸಾಧನಾ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾುತು.
ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಹಾಗೂ ನಿತ್ಯಾನಂದ ಕಾರಂತ ಪೊಳಲಿ ಉಪಸ್ಥಿತರಿದ್ದರು. ಸುಧಾಕರ ರಾವ್ ಪೇಜಾವರ ಸ್ವಾಗತಿಸಿದರು. ಜಿ.ಕೆ. ಭಟ್ ಸೇರಾಜೆ ಕಾರ್ಯಕ್ರಮ ನಿರೂಪಿಸಿದರು. ಜನಾರ್ದನ ಹಂದೆ ವಂದಿಸಿದರು.