ಕರ್ನಾಪೆಕ್ಸ್ -19 ಅಂಚೆ ಚೀಟಿ ಪ್ರದರ್ಶನ: ಅಂಚೆ ಲೋಕದ ವಿಸ್ಮಯದ ಅನಾವರಣ !

Update: 2019-10-12 14:25 GMT

ಮಂಗಳೂರು, ಅ.12: ನಾಗರಿಕತೆಯೊಂದಿಗೆ ಸಂವಹನ ಮಾಧ್ಯಮವಾಗಿ ಬೆಳೆದು ಬಂದ ಅಂಚೆ ವ್ಯವಸ್ಥೆಯ ಇತಿಹಾಸ, ವೈವಿಧ್ಯತೆ, ಭಿನ್ನತೆಯ ಜತೆಗೆ ಅಂಚೆಚೀಟಿಗಳ ಅಂತಾರಾಷ್ಟ್ರೀಯ ಮಾನ್ಯತೆ, ಘನತೆ, ಗಾಂಭೀರ್ಯಕ್ಕೊಂದು ಸಾಕ್ಷಿ ಕರ್ನಾಪೆಕ್ಸ್ -19.

ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ, ನಗರದ ಟಿಎಂಎ ಪೈ ಕನ್ವೆನ್ಶನ್ ಸೆಂಟರ್‌ನಲ್ಲಿ ಇಂದು ಆರಂಭಗೊಂಡ ಕರ್ನಾಪೆಕ್ಸ್- 19 ಅಂಚೆ ಚೀಟಿಗಳ ಪ್ರದರ್ಶನ ಅಂಚೆ ಲೋಕದ ವಿಶ್ಮಯವನ್ನು ಅನಾವರಣಗೊಳಿಸುತ್ತಿದೆ.

ಇಂದಿನಿಂದ ನಾಲ್ಕು ದಿನಗಳ ಕಾಲ ನಡೆಯಲಿರುವ ಈ ಪ್ರದರ್ಶನದಲ್ಲಿ 600ಕ್ಕೂ ಅಧಿಕ ಫ್ರೇಮ್‌ಗಳಲ್ಲಿ ಸಹಸ್ರಾರು ಸಂಖ್ಯೆಯ, ವೈವಿಧ್ಯಮಯ, ಅಂತಾರಾಷ್ಟ್ರೀಯ ಅಂಚೆ ಚೇಟಿಗಳ ಸಂಗ್ರಹವನ್ನು ಕಣ್ತುಂಬಿಸಿಕೊಳ್ಳಬಹುದು.

ನೋಡಿದಷ್ಟು ಮುಗಿಯದ ಅಪರೂಪದ ಸಂಗ್ರಹ...

ಟಿಎಂಎಪೈ ಕನ್ವೆನ್ಷನ್ ಸೆಂಟರ್‌ನ ವಿಶಾಲವಾದ ಸಭಾಂಗಣದಲ್ಲಿ ಅಂಚೆ ಚೀಟಿಗಳ ಸಂಗ್ರಾಹದ ಹವ್ಯಾಸಿಗರು ಮಾತ್ರವಲ್ಲದೆ, ನೋಡಿದಷ್ಟೂ ಮುಗಿಯದ ಅಪಾರ ಅಂಚೆ ಚೀಟಿಗಳ ಸಂಗ್ರಹ ಈ ಪ್ರದರ್ಶನದಲ್ಲಿದೆ. ಅಂಚೆ ಇಲಾಖೆಯ ಉಗಮದೊಂದಿಗೆ, ಅಂತಾರಾಷ್ಟ್ರೀಯ ಅಂಚೆ ಚೀಟಿಗಳ ವೈವಿಧ್ಯತೆ ಈ ಪ್ರದರ್ಶನದಲ್ಲಿದೆ. ಭಾರತದ ಸ್ವಾತಂತ್ರ ಪೂರ್ವದ ಅಂಚೆ ಚೀಟಿಗಳೊಂದಿಗೆ, ಚಿನ್ನ, ಬೆಳ್ಳಿ ಲೇಪಿತ ಅಂತಾರಾಷ್ಟ್ರೀಯ ಅಂಚೆ ಚೀಟಿಗಳನ್ನೂ ಈ ಪ್ರದರ್ಶನದಲ್ಲಿ ವೀಕ್ಷಿಸಬಹುದಾಗಿದೆ.

ಅಂದಾಜು 50 ಲಕ್ಷ ರೂ. ಮೌಲ್ಯದ ಸಿಂಧ್‌ಡಾಕ್ !

ಪ್ರದರ್ಶನದಲ್ಲಿ ಪ್ರಥಮ ಪ್ರಾಶಸ್ತ್ಯ ಪಡೆದಿರುವ ಭಾರತದಲ್ಲಿ 1852ರಲ್ಲಿ ಬಿಡುಗಡೆಗೊಂಡಿದ್ದ ಸಿಂಧ್ ಡಾಕ್ ಅಂಚೆ ಚೀಟಿ ಪ್ರಸ್ತುತ ಅಂದಾಜು 50 ಲಕ್ಷ ರೂ. ಮೌಲ್ಯದ್ದಾಗಿದೆ ಎನ್ನುತ್ತಾರೆ ಹವ್ಯಾಸಿ ಅಂಚೆಚೀಟಿ ಸಂಗ್ರಾಹಕ ಎಂ.ಕೆ. ಕೃಷ್ಣಯ್ಯ.

ಪ್ರದರ್ಶನದಲ್ಲಿರುವ ಪ್ರತಿಯೊಂದು ಅಂಚೆ ಚೀಟಿಗಳು ಕೂಡಾ ತನ್ನದೇ ಆದ ವೈಶಿಷ್ಟ, ವೈವಿಧ್ಯತೆಯನ್ನು ಹೊಂದಿದೆ. ದ.ಕ. ಹವ್ಯಾಸಿ ಅಂಚೆಚೀಟಿ ಸಂಗ್ರಾಹಕರ ಮಾಜಿ ಅಧ್ಯಕ್ಷರೂ ಆಗಿರುವ ಕೃಷ್ಣಯ್ಯ ಅವರ ಫ್ಲಾಗ್‌ಗಳ (ಪತಾಕೆ, ಬಾವುಟ) ಇತಿಹಾಸವನ್ನು ವೈಭವೀಕರಿಸುವ ಅಂಚೆ ಚೀಟಿಗಳು ಸಂಗ್ರಹವೂ ಪ್ರದರ್ಶನದಲ್ಲಿದೆ.

ವಿದೇಶಗಳ ಚಿನ್ನ- ಬೆಳ್ಳಿ ಲೇಪಿತ ಅಂಚೆ ಚೀಟಿಗಳು

ಭೂತಾನ್, ತೈವಾನ್, ನಾರ್ತ್ ಕೊರಿಯಾ, ಥೈಲ್ಯಾಂಡ್, ಆಸ್ಟ್ರಿಯಾ, ಮಲೇಶಿಯಾ, ಕೊರಿಯಾ ಸೇರಿದಂತೆ ವಿದೇಶಗಳ ಚಿನ್ನ, ಬೆಳ್ಳಿಯಿಂದ ಲೇಪನಗೊಂಡ ಅಪರೂಪದ ಅಂಚೆ ಚೀಟಿಗಳನ್ನು ಈ ಪ್ರದರ್ಶನದಲ್ಲಿ ಕಣ್ತುಂಬಿಸಿಕೊಳ್ಳಬಹುದಾಗಿದೆ.

ಇದಲ್ಲದೆ ಗುಲಾಬಿ, ಮಲ್ಲಿಗೆ, ಗಂಧ ಮೊದಲಾದ ಪರಿಮಳಯುಕ್ತ, ಗಾಂಧೀಜಿ ಚರಕರದಲ್ಲಿ ನೂಲುವ ಅಪರೂಪದ ರೇಷ್ಮೆ ಬಟ್ಟೆಯ ಪೇಪರ್ ಅಂಚೆಚೀಟಿ, ಸಮಗ್ರ ಯೋಗ, ರೊಮ್ಯಾನ್ಸ್, ಸೆರಾಮಿಕ್/ ಗಾಜು/ರಬ್ಬರ್/ಕ್ರಿಸ್ಟಲ್ ಅಂಚೆಚೀಟಿಗಳು, ವಾಚ್, ಕಣ್ಣೀರು ಮಾದರಿಯ, ಅಸಾಮಾನ್ಯ ವಸ್ತುಗಳ, 3ಡಿ ಇಫೆಕ್ಟ್‌ನ, ಹೋಲೋಗ್ರಾಂ ಪ್ರಿಂಟಿಂಗ್‌ನ, ಹೀಟ್ ಮೌಲ್ಡ್, ಎಂಬೋಸಿಂಗ್ ಹೀಗೆ ಒಂದಕ್ಕೊಂದು ಭಿನ್ನ ಅಂಚೆ ಚೀಟಿಗಳನ್ನು ಈ ಪ್ರದರ್ಶನದಲ್ಲಿ ಸಾರ್ವಜನಿಕರು ವೀಕ್ಷಿಸಲು ಅವಕಾಶವಿದೆ. ಮಹಾತ್ಮ ಗಾಂಧೀಜಿಯವರ ಅಪರೂಪದ ಅಂಚೆಚೀಟಿಗಳು ಹಾಗೂ ಇಂದು ಬಿಡುಗಡೆಗೊಂಡ ಮಹಾನ್ ನಾಯಕರ ಅಂಚೆ ಲಕೋಟೆಗಳ ಮಾರಾಟಕ್ಕೂ ಅವಕಾಶವನ್ನು ಕಲ್ಪಿಸಲಾಗಿದೆ. ಅ. 15ರವರೆಗೆ ನಡೆಯಲಿರುವ ಪ್ರದರ್ಶನವು ಬೆಳಗ್ಗೆ 10ರಿಂದ ಸಂಜೆ 7 ಗಂಟೆಯವೆಗೆ ಪ್ರೇಕ್ಷಕರ ವೀಕ್ಷಣೆಗೆ ಲಭ್ಯ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News