ಮಾಧ್ಯಮಗಳಿಗೆ ನಿರ್ಬಂಧ ಸರಿಯಲ್ಲ: ನ್ಯಾ. ಸಂತೋಷ್ ಹೆಗ್ಡೆ

Update: 2019-10-12 13:40 GMT

ಮಂಗಳೂರು, ಅ.12: ಮಾಧ್ಯಮ ಸಂವಿಧಾನದ ನಾಲ್ಕನೇ ಆಧಾರ ಸ್ತಂಭ ಪ್ರಜಾತಂತ್ರ ವ್ಯವಸ್ಥೆಯಲ್ಲಿ ವಿಧಾನಸಭಾ ಕಲಾಪ ಪ್ರಸಾರಕ್ಕೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿರುವ ರಾಜ್ಯ ಸರಕಾರದ ಕ್ರಮ ಸರಿಯಲ್ಲ ಎಂದು ಎಂದು ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅಭಿಪ್ರಾಯಿಸಿದರು.

ನಗರದಲ್ಲಿ ಇಂದು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು ಸುದ್ದಿಗಾರ ಪ್ರಶ್ನೆಗೆ ಈ ಪ್ರತಿಕ್ರಿಯೆ ನೀಡಿದರು. ಸರಕಾರಿ ಸ್ವಾಮ್ಯದ ದೂರದರ್ಶನಕ್ಕೆ ಮಾತ್ರ ಅವಕಾಸ ನೀಡಿ ಅಧಿವೇಶನದ ಚಿತ್ರೀಕರಣ ಹಾಗೂ ಛಾಯಾಗ್ರಹಣಕ್ಕೆ ನಿರ್ಬಂಧ ಹೇರಿರುವುದು ಸರಿಯಲ್ಲ. ಮಾಧ್ಯಮಗಳಿಗೂ ತಮ್ಮದೇ ಆದ ಇತಿಮಿತಿಗಳಿವೆ. ಮಾಧ್ಯಮಗಳೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಿವೆ. ಹಾಗಿರುವಾಗ ಜನತಾ ಪ್ರತಿನಿಧಿಗಳ ಅಧಿವೇಶನವನ್ನು ಮಾಧ್ಯಮಗಳಿಂದ ಹೊರಗಿಡುವುದು ಸರಿಯಲ್ಲ ಎಂದರು.

ಐಎಎಸ್ ರಾಜಿನಾಮೆ ಸರಿಯಲ್ಲ

ದೇಶದ ಆಡಳಿತ ಧೋರಣೆ ವಿರೋಧಿಸಿ ಐಎಎಸ್ ಹುದ್ದೆಗೆ ಇತಿತೀಚೆಗೆ ರಾಜಿನಾಮೆ ನೀಡಿದ ವಿದ್ಯಮಾನಗಳಿಗೆ ಸಂಬಂಧಿಸಿದ ಪ್ರಶ್ನೆಗೆ, ಸಂವಿಧಾನದ ಎರಡನೇ ಆಧಾರಸ್ತಂಭ ಕಾರ್ಯಾಂಗ. ಹಾಗಿರುವಾಗ ಇಲ್ಲಿ ಭಾವನಾತ್ಮಕ ವಿಚಾರಗಳಿಗೆ ಆಸ್ಪದವಿಲ್ಲ. ಐಎಎಸ್ ರಾಜಿನಾಮೆಯನ್ನು ನಾನು ಒಪ್ಪುವುದಿಲ್ಲ ಎಂದು ನ್ಯಾ. ಸಂತೋಷ್ ಹೆಗ್ಡೆ ಹೇಳಿದರು.

ಐಟಿ ದಾಳಿ ತಪ್ಪಲ್ಲ

ಅಕ್ರಮ ಸಂಪತ್ತು, ಸಂಪತ್ತು ದುರ್ಬಳಕೆ ವಿಚಾರದಲ್ಲಿ ಐಟಿ ದಾಳಿ ಸಾಮಾನ್ಯ. ಐಟಿ ಇಲಾಖೆ ತನ್ನ ಕಾರ್ಯವನ್ನು ಮಾಡುತ್ತದೆ. ಅದಕ್ಕೆ ಅಡ್ಡಿಪಡಿಸುವುದು ಸರಿಯಲ್ಲ. ಪ್ರತಿ ಬಾರಿ ಐಟಿ ದಾಳಿಯಾದಾಗಲೂ ವಿಪಕ್ಷದಲ್ಲಿ ಇರುವವರು ಆಡಳಿತವನ್ನು ದೂರುವುದು ಸಹಜ ಎಂದು ನ್ಯಾಯವುೂರ್ತಿ ಸಂತೋಷ್ ಹೆಗ್ಡೆ ಹೇಳಿದರು.

ದೇಶದಲ್ಲಿ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ವಿರುದ್ಧ ಮಾತನಾಡಿದರೆ ಪ್ರಗತಿಪರರ ವಿರುದ್ಧ ರಾಜದ್ರೋಹದ ಪ್ರಕರಣ ದಾಖಲಿಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಜಸ್ಟಿಸ್ ಸಂತೋಷ್ ಹೆಗ್ಡೆ, ಇಂತಹ ಬೆಳವಣಿಗೆ ನಡೆಯಬಾರದಿತ್ತು. ಹಾಗೆಂದು ದೇಶದ ಹಿತ ಕಾಯುವ ಬದಲು ದೇಶ ವಿರೋಧಿ ಹೇಳಿಕೆ ನೀಡುವುದು ಸರಿಯಾದ ಕ್ರಮವಲ್ಲ. ದೇಶದ ಹಿತಾಸಕ್ತಿ ವಿಚಾರದಲ್ಲಿ ರಾಜದ್ರೋಹ ಕಾಯ್ದೆ ಅನಿವಾರ್ಯ. ಇದು ದೇಶದ ಹಿತಕ್ಕೆ ಬಳಕೆಯಾಗಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News