ಮೊದಲ ಮಣಿಪಾಲ ಹ್ಯಾಕಥಾನ್‌ಗೆ ಚಾಲನೆ

Update: 2019-10-12 15:06 GMT

 ಮಣಿಪಾಲ, ಅ.12: ಸ್ಥಳೀಯ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಎಂಐಟಿ) ವಿದ್ಯಾರ್ಥಿ ಸಂಘ ಇದೇ ಮೊದಲ ಬಾರಿ ಆಯೋಜಿಸಿರುವ ಮಣಿಪಾಲ ಹ್ಯಾಕಥಾನ್‌ಗೆ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಶುಕ್ರವಾರ ಸಂಸ್ಥೆಯ ಆರ್‌ಎಂಡ್‌ಡಿ ಸಭಾಂಗಣದಲ್ಲಿ ಅಧಿಕೃತ ಚಾಲನೆ ನೀಡಿದ್ದಾರೆ.

ಸತತ 36 ಗಂಟೆಗಳ ಕಾಲ ನಡೆಯುವ ಈ ಹ್ಯಾಕಥಾನ್‌ನಲ್ಲಿ ಹೈದರಾಬಾದ್‌ನ ಬಿಐಟಿಎಸ್, ವೆಲ್ಲೂರಿನ ವಿಐಟಿ, ಚೆನ್ನೈನ ವಿಐಟಿ, ಪುಣೆಯ ಪಿಐಸಿಟಿ ಸೇರಿದಂತೆ ದೇಶದಾದ್ಯಂತದಿಂದಇಂಜಿನಿಯರಿಂಗ್ ಕಾಲೇಜುಗಳಿಂದ ಬಂದ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.

ಹ್ಯಾಕಥಾನ್‌ನಂಥ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಸಂಘಟಿಸುವುದರಿಂದ ವಿದ್ಯಾರ್ಥಿಗಳಲ್ಲಿ ಸಂಶೋಧನಾ ಪ್ರವೃತ್ತಿ ಹೆಚ್ಚುತ್ತದೆ. ಹೊಸತರ ಶೋಧನೆಗೆ ಹೆಚ್ಚೆಚ್ಚು ಪ್ರೋತ್ಸಾಹ ನೀಡಬೇಕಾದ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ತಿಳಿಸಿದರು.

ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಮಾತನಾಡಿ, ಸಂಶೋಧನೆಗೆ ಹೆಚ್ಚು ಒತ್ತು ನೀಡಬೇಕಾದ ಅಗತ್ಯವನ್ನು ಒತ್ತಿ ಹೇಳಿದರು. ಗ್ರಾಮೀಣ ಜನರ ಹಾಗೂ ಮಹಿಳೆಯರ ಸಬಲೀಕರಣಕ್ಕೆ ತಂತ್ರಜ್ಞಾನವನ್ನು ಬಳಸುವಂತೆ ಅವರು ತಿಳಿಸಿದರು. ಎಂಐಟಿಯ ಜಂಟಿ ನಿರ್ದೇಶಕ ಡಾ.ಬಿ. ಎಚ್.ವಿ.ಪೈ ಉಪಸ್ಥಿತರಿದ್ದರು.

ಕೇಂದ್ರ ಸರಕಾರದ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್‌ನ ಸ್ಪೂರ್ತಿಯಿಂದ ಪ್ರಾರಂಭಿಸಲಾದ ಮಣಿಪಾಲ ಹ್ಯಾಕಥಾನ್, ಸಾಫ್ಟ್‌ವೇರ್ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವ ಪ್ರಯತ್ನವಾಗಿದೆ. ಇದು ಮೇ ತಿಂಗಳಲ್ಲಿ ಪ್ರಾರಂಭಗೊಂಡಿದ್ದು, ಸಾಫ್ಟ್‌ವೇರ್ ಪ್ರೋಗ್ರಾಮ್‌ಗಳ ಮೂಲಕ ಸಾಮಾಜಿಕ ಸಮಸ್ಯೆಗಳಿಗೆ ಉತ್ತರ ಕಂಡುಹಿಡಿಯಲು ಪ್ರಯತ್ನಿಸಲಾಗುತ್ತಿದೆ.

ದೇಶಾದ್ಯಂತದಿಂದ ಬಂದ 1500ಕ್ಕೂ ಅಧಿಕ ಮಂದಿ ಪ್ರಾರಂಭಿಕ ಸುತ್ತಿನಲ್ಲಿ ಸ್ಪರ್ಧಿಸಿದ್ದರೆ, ಇದೀಗ ಸತತ 36 ಗಂಟೆಗಳ ಫೈನಲ್ ರೌಂಡ್‌ಗೆ 30 ತಂಡಗಳ 125 ಮಂದಿಯನ್ನು ಆಯ್ಕೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News