ಪ್ರಶಾಮಕ ಆರೈಕೆ ದಿನಾಚರಣೆ ಪ್ರಯುಕ್ತ ಜಾಗೃತಿ ನಡಿಗೆ

Update: 2019-10-12 15:15 GMT

ಉಡುಪಿ, ಅ.12: ಮಣಿಪಾಲ ಕೆಎಂಸಿ ಆಸ್ಪತ್ರೆಯ ವತಿಯಿಂದ ವಿಶ್ವ ಪ್ರಶಾಮಕ ಆರೈಕೆ ದಿನಾಚರಣೆಯ ಪ್ರಯುಕ್ತ ‘ನನ್ನ ಆರೈಕೆ ನನ್ನ ಹಕ್ಕು’ ಎಂಬ ಧ್ಯೇಯ ವಾಕ್ಯದೊಂದಿಗೆ ಜಾಗೃತಿ ನಡಿಗೆ ಕಾರ್ಯಕ್ರಮವನ್ನು ಉಡುಪಿ ನಗರಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿತ್ತು.

ನಗರದ ಸರ್ವಿಸ್ ಬಸ್ ನಿಲ್ದಾಣ ಬಳಿಯ ಬೋರ್ಡ್ ಹೈಸ್ಕೂಲ್ ಎದುರು ಕಾರ್ಯಕ್ರಮಕ್ಕೆ ಮಣಿಪಾಲ ಮಾಹೆಯ ಸಹ ಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್ ಚಾಲನೆ ನೀಡಿದರು. ಬಳಿಕ ಜಾಗೃತಿ ನಡಿಗೆಯು ಉಡುಪಿ ಡಾ. ಟಿಎಂಎ ಪೈ ಆಸ್ಪತ್ರೆಯವರೆಗೆ ನಡೆಯಿತು. ಇದರಲ್ಲಿ ನೂರಾರು ಮಂದಿ ವೈದ್ಯರು, ವಿದ್ಯಾರ್ಥಿಗಳು, ಸಿಬ್ಬಂದಿ ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.

ಬಳಿಕ ಆಸ್ಪತ್ರೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ಮಾತನಾಡಿ, ಇಂತಹ ಕಾರ್ಯಕ್ರಮ ಬಹಳ ಪ್ರಯೋಜನಕಾರಿಯಾಗಿದ್ದು, ಈಗಿನ ಪೀಳಿಗೆಯ ಜನರಿಗೆ ತುಂಬಾ ಅವಶ್ಯಕವಾದದ್ದು. ಹಿರಿಯರು ಮತ್ತು ತೀವ್ರತರವಾದ ಕಾಯಿಲೆ ಯಿಂದ ಬಳಲುವವರಿಗೆ ಪ್ರಶಾಮಕ ಆರೈಕೆಯು ಬಹಳ ಪ್ರಯೋಜನಕಾರಿ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಡಾ.ಎಚ್.ಎಸ್.ಬಲ್ಲಾಳ್ ಮಾತನಾಡಿ, ಹೆಚ್ಚಿನ ಜನರಿಗೆ ಪ್ರಶಾಮಕ ಆರೈಕೆ ಮತ್ತು ಚಿಕಿತ್ಸೆಯ ಬಗ್ಗೆ ಮಾಹಿತಿಯ ಕೊರತೆ ಇದೆ. ಎಲ್ಲಾ ಜನರು ತಮ್ಮ ಜೀವನದ ಅಂತ್ಯವು ಸುಖಕರವಾಗಿರಬೇಕು ಎಂದು ಬಯಸು ತ್ತಾರೆ. ಆದರೆ ದೀರ್ಘಾವದಿಯ ಕಾಯಿಲೆಯಿಂದ ಬಳಲುವವರಿಗೆ ಇದು ಕಷ್ಟ ಸಾಧ್ಯ. ಈಗ ಈ ಪ್ರಶಾಮಕ ಆರೈಕೆಯ ಮೂಲಕ ಅದನ್ನು ಸಾಧ್ಯವಾಗಿಸ ಬಹುದು ಎಂದರು.

ವೇದಿಕೆಯಲ್ಲಿ ಮಾಹೆ ಸಹ ಉಪಕುಲಪತಿ ಡಾ.ಪೂರ್ಣಿಮಾ ಬಾಳಿಗಾ, ಕೆಎಂಸಿಯ ಡೀನ್ ಡಾ.ಶರತ್ ಕುಮಾರ್ ರಾವ್, ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಸಿ.ಜಿ.ಮುತ್ತಣ್ಣ ಉಪಸ್ಥಿತರಿದ್ದರು.

ಉಡುಪಿ ಡಾ.ಟಿಎಂಎ ಪೈ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ಪಾರ್ವತಿ ವಿ.ಭಟ್ ಸ್ವಾಗತಿಸಿದರು. ಪ್ರಶಾಮಕ ಚಿಕಿತ್ಸಾ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ.ನವೀನ್ ಎಸ್.ಸಾಲಿನ್ಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ವಂದಿಸಿದರು. ಡಾ. ಕೃತಿಕಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News