ಪಂಜಾಬ್ ಮತ್ತು ಸಿಂಧ್ ಬ್ಯಾಂಕ್‌ಗೆ 44 ಕೋಟಿ ರೂ. ವಂಚಿಸಿದ ಮೆಹುಲ್ ಚೋಕ್ಸಿ: ವರದಿ

Update: 2019-10-12 16:34 GMT

ಮುಂಬೈ, ಅ.12: ಪಂಜಾಬ್ ಮತ್ತು ಸಿಂಧ್ ಬ್ಯಾಂಕ್(ಪಿಎಸ್‌ಬಿ)ಗೆ ವಜ್ರೋದ್ಯಮಿ ಮೆಹುಲ್ ಚೋಕ್ಸಿ 44 ಕೋಟಿ ರೂ. ವಂಚಿಸಿದ್ದಾನೆ ಎಂದು ಬ್ಯಾಂಕ್ ಶನಿವಾರ ತಿಳಿಸಿದೆ.

ಚೋಕ್ಸಿ ನಡೆಸಿರುವ ವಂಚನೆಯ ಪ್ರಮಾಣದ ಬಗ್ಗೆ ಇದೇ ಪ್ರಥಮ ಬಾರಿಗೆ ಬ್ಯಾಂಕ್ ಪೂರ್ಣ ವಿವರ ನೀಡಿದೆ.

ಮೆಹುಲ್ ಚೋಕ್ಸಿಯ ಸಂಸ್ಥೆ ಗೀತಾಂಜಲಿ ಜೆಮ್ಸ್ ಲಿ. ಹಾಗೂ ಗೀತಾಂಜಲಿ ಎಕ್ಸ್‌ಪೋರ್ಟ್ ಲಿ. ಸಂಸ್ಥೆಯ ಪರವಾಗಿ ಪಿಎಸ್‌ಬಿಯಿಂದ ಸಾಲ ಪಡೆಯಲಾಗಿದೆ. ಅಲ್ಲದೆ ಗುನಿಯಾಲ್ ಚೋಕ್ಸಿ ಪಡೆದಿರುವ ಸಾಲಕ್ಕೆ ಮೆಹುಲ್ ಚೋಕ್ಸಿ ಜಾಮೀನುಗಾರನಾಗಿದ್ದಾನೆ. ಆದರೆ ಸಾಲ ಮರುಪಾವತಿಸಲು ವಿಫಲವಾದ ಹಿನ್ನೆಲೆಯಲ್ಲಿ 2018ರ ಮಾರ್ಚ್ 31ರಂದು ಸಾಲದ ಮೊತ್ತವನ್ನು ಅನುತ್ಪಾದಕ ಆಸ್ತಿ(ಎನ್‌ಪಿಎ) ಎಂದು ಬ್ಯಾಂಕ್ ಘೋಷಿಸಿತ್ತು.

  ಅಲ್ಲದೆ ಮೆಹುಲ್ ಚೋಕ್ಸಿ ಉದ್ದೇಶಪೂರ್ವಕ ಸುಸ್ತಿದಾರನೆಂದು ಘೋಷಿಸಿದ ಬ್ಯಾಂಕ್ ಸಾಲ ವಸೂಲಿ ಪ್ರಕ್ರಿಯೆ ಆರಂಭಿಸಿತ್ತು. ಇದರೊಂದಿಗೆ ಬ್ಯಾಂಕ್‌ನ 27 ಇತರ ‘ಉದ್ದೇಶಪೂರ್ವಕ ಸುಸ್ತಿದಾರರ’ ಪಟ್ಟಿಗೆ ಮೆಹುಲ್ ಚೋಕ್ಸಿ ಹೆಸರು ಸೇರ್ಪಡೆಯಾಗಿದೆ.

ಈ ಮಧ್ಯೆ, ದೇಶದಿಂದ ಪಲಾಯನ ಮಾಡಿರುವ ಚೋಕ್ಸಿ ವೆಸ್ಟಿಂಡೀಸ್‌ನ ಆ್ಯಂಟಿಗ್ವಾ ಮತ್ತು ಬಾರ್ಬಡೋಸ್‌ನ ಪೌರತ್ವ ಪಡೆದಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News