ಪಾಶ್ವಾತ್ಯ ಸಂಗೀತದಿಂದ ಭಾರತೀಯ ಸಂಗೀತಕ್ಷೇತ್ರಕ್ಕೆ ಅಪಾಯವಿಲ್ಲ. ಡಾ. ಹೆಗ್ಗಡೆ

Update: 2019-10-12 16:55 GMT

ಬೆಳ್ತಂಗಡಿ:  ಪಾಶ್ಚಾತ್ಯ ಸಂಗೀತದ ಪ್ರಭಾವದಿಂದ ಯಕ್ಷಗಾನ, ಜನಪದ ಕಲೆಗಳು, ಶಾಸ್ತ್ರೀಯ ಸಂಗೀತ ಮೊದಲಾದ ಭಾರತೀಯ ಕಲಾ ಪ್ರಕಾರಗಳು ಮರೆಯಾಗಬಹುದೆಂಬ ಭಯ, ಆತಂಕ ಅಗತ್ಯವಿಲ್ಲ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಅವರು ಶನಿವಾರ ಧರ್ಮಸ್ಥಳದಲ್ಲಿ ವಸಂತ ಮಹಲ್‍ನಲ್ಲಿ  ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬೆಂಗಳೂರಿನ ಸ್ವರಮೂರ್ತಿ ವಿ.ಎನ್. ರಾವ್ ಮೆಮೋರಿಯಲ್‍ ಟ್ರಸ್ಟ್ ನ ಸಂಯುಕ್ತ ಆಶ್ರಯದಲ್ಲಿ ನಡೆದ ವೀಣೆ ಶೇಷಣ್ಣ ಸ್ಮಾರಕ ಸಂಗೀತೋತ್ಸವದಲ್ಲಿ ಸಂಗೀತ ಕಳಾನಿಧಿ ಎ. ಕನ್ಯಾಕುಮಾರಿ ಅವರಿಗೆ ವೀಣೆ ಶೇಷಣ್ಣ ಸ್ಮಾರಕರಾಷ್ಟ್ರೀಯ ಪ್ರಶಸ್ತಿ (ಒಂದು ಲಕ್ಷರೂ. ನಗದು) ಹಾಗೂ ಸಂಗೀತಕಲಾರತ್ನ ನೀಲಾ ರಾಂಗೋಪಾಲ್‍ ಅವರಿಗೆ ಸ್ವರಮೂರ್ತಿ ವಿ.ಎನ್. ರಾವ್ ಸ್ಮಾರಕರಾಷ್ಟ್ರೀಯ ಪ್ರಶಸ್ತಿ (ಒಂದು ಲಕ್ಷ ರೂ. ನಗದು) ನೀಡಿ ಗೌರವಿಸಿದರು.

ಅನೇಕ ಮಂದಿ ಯುವಕಲಾವಿದರು ವಿವಿಧ ಭಾರತೀಯ ಸಂಗೀತ ಕಲಾಪ್ರಕಾರಗಳನ್ನು ಆಸಕ್ತಿಯಿಂದ ಅಧ್ಯಯನ ಮಾಡಿ ಇಂದು ಜಾಗತಿಕ ಮಟ್ಟದಲ್ಲಿ ಉನ್ನತ ಸಾಧನೆ ಮಾಡಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಯಾವುದೇ ರೀತಿಯ ಪಾಶ್ಚಾತ್ಯ ಸಂಗೀತ ಹಾಗೂ ವಾದ್ಯಗಳು ಭಾರತೀಯ ಮೂಲದ ಸಂಗೀತ ಪರಂಪರೆಯನ್ನು ಮೀರಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಹೇಮಾವತಿ ವಿ. ಹೆಗ್ಗಡೆ ಸಮಾರಂಭವನ್ನು ಉದ್ಘಾಟಿಸಿದರು. ಪ್ರಶಸ್ತಿ ಪುರಸ್ಕೃತರಾದ ಎ. ಕನ್ಯಾಕುಮಾರಿ ಹಾಗೂ ನೀಲಾ ರಾಂಗೋಪಾಲ್ ಮಾತನಾಡಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಬೆಂಗಳೂರಿನ ಸ್ವರಮೂರ್ತಿ ವಿ.ಎನ್. ರಾವ್ ಮೆಮೋರಿಯಲ್‍ಟ್ರಸ್ಟ್‍ನ ಅಧ್ಯಕ್ಷ ಪ್ರೊ. ಮೈಸೂರು ವಿ.ಸುಬ್ರಹ್ಮಣ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ವೀಣೆ ಮತ್ತು ಮೈಸೂರಿಗೆ ಇರುವ ಅವಿನಾಭಾವ ಸಂಬಂಧವನ್ನು ವಿವರಿಸಿ ವೀಣೆ ಶೇಷಣ್ಣ ಸ್ಮಾರಕ ಸಂಗೀತೋತ್ಸವದ ಮೂಲಕ ಅನೇಕ ಹಿರಿಯಕಲಾವಿದರನ್ನುಗೌರವಿಸಲಾಗುತ್ತದೆ ಎಂದರು.

ವೀಣೆ ಶೇಷಣ್ಣ ಸ್ಮಾರಕ ಸಂಗೀತೋತ್ಸವ ಸ್ವಾಗತ ಸಮಿತಿಅಧ್ಯಕ್ಷ ಡಿ. ಹರ್ಷೇಂದ್ರಕುಮಾರ್ ಸ್ವಾಗತಿಸಿದರು. ಶ್ಯಾಮ ಸುಂದರ ಶರ್ಮ ವಂದಿಸಿದರು. ರಾಧಿಕಾ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News