ಕಡಲ್ಗಳ್ಳರ ವಿರುದ್ಧ ಪ್ರತೀಕಾರ ನಡೆಸದೆ ಬಿಡುವುದಿಲ್ಲ: ಇರಾನ್

Update: 2019-10-12 17:32 GMT

ಟೆಹರಾನ್, ಅ. 12: ಸೌದಿ ಅರೇಬಿಯ ಕರಾವಳಿಯಲ್ಲಿ ತನ್ನ ತೈಲ ಹಡಗೊಂದರ ಮೇಲೆ ನಡೆದ ದಾಳಿಗೆ ಪ್ರತೀಕಾರ ಕೈಗೊಳ್ಳುವುದಾಗಿ ಇರಾನ್ ಶನಿವಾರ ಹೇಳಿದೆ ಎಂದು ಆ ದೇಶದ ಸುದ್ದಿ ಸಂಸ್ಥೆ ‘ಇಸ್ನ’ ವರದಿ ಮಾಡಿದೆ.

‘ಸಬೀತಿ’ ಟ್ಯಾಂಕರ್ ಮೇಲೆ ನಡೆದ ಕ್ಷಿಪಣಿ ದಾಳಿಯ ಹಿಮದೆ ಯಾರಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ ಎಂದು ಸುಪ್ರೀಮ್ ನ್ಯಾಶನಲ್ ಸೆಕ್ಯುರಿಟಿ ಕೌನ್ಸಿಲ್‌ನ ಕಾರ್ಯದರ್ಶಿ ಅಲಿ ಶಮ್ಖಾನಿ ಹೇಳಿದರು.

‘‘ಕಡಲುಗಳ್ಳತನ ಮತ್ತು ಅಂತರ್‌ರಾಷ್ಟ್ರೀಯ ಜಲಮಾರ್ಗದಲ್ಲಿನ ದುರುಳತನಕ್ಕೆ ಶಿಕ್ಷೆಯಾಗದೆ ಇರುವುದಿಲ್ಲ’’ ಎಂದು ಅವರು ಹೇಳಿರುವುದಾಗಿ ‘ಇಸ್ನ’ ತಿಳಿಸಿದೆ.

‘‘ಲಭ್ಯವಿರುವ ವೀಡಿಯೊ ಪರಿಶೀಲನೆ ಹಾಗೂ ಸಂಗ್ರಹಿಸಲಾದ ಗುಪ್ತಚರ ಮಾಹಿತಿಗಳ ಮೂಲಕ ಇರಾನ್ ತೈಲ ಟ್ಯಾಂಕರ್‌ನ ಮೇಲೆ ದಾಳಿ ನಡೆಸುವ ಅಪಾಯಕಾರಿ ಸಾಹಸವನ್ನು ಕೈಗೊಂಡವರ ಬಗ್ಗೆ ಪ್ರಾಥಮಿಕ ಮಾಹಿತಿಗಳು ಲಭ್ಯವಾಗಿವೆ’’ ಎಂದು ಅಲಿ ಶಮ್ಖಾನಿ ಹೇಳಿದರು.

ತೈಲ ಹಡಗಿನ ತೈಲ ಸೋರಿಕೆ ಬಂದ್

ಈ ನಡುವೆ, ಕ್ಷಿಪಣಿ ದಾಳಿಗೆ ಒಳಗಾಗಿದೆ ಎನ್ನಲಾದ ಇರಾನ್‌ನ ತೈಲ ಟ್ಯಾಂಕರ್‌ನಿಂದ ತೈಲ ಸೋರುವುದನ್ನು ನಿಲ್ಲಿಸಲಾಗಿದೆ ಹಾಗೂ ಅದು ಕೊಲ್ಲಿಯತ್ತ ಮುಂದುವರಿಯುತ್ತಿದೆ ಎಂದು ಇರಾನ್‌ನ ಸುದ್ದಿ ಸಂಸ್ಥೆ ‘ಮೆಹರ್’ ಶನಿವಾರ ವರದಿ ಮಾಡಿದೆ.

‘‘ತೈಲ ಹಡಗು ಪರ್ಸಿಯನ್ ಕೊಲ್ಲಿಯತ್ತ ಚಲಿಸುತ್ತಿದೆ ಹಾಗೂ ಅದು ಇರಾನ್ ಜಲಪ್ರದೇಶವನ್ನು ಸುರಕ್ಷಿತವಾಗಿ ಪ್ರವೇಶಿಸುತ್ತದೆ ಎಂದು ನಾವು ಆಶಿಸುತ್ತೇವೆ’’ ಎಂದು ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಅದು ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News